ಬೆಂಗಳೂರು
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಮನವಿ ನೀಡಲಾಯಿತು.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಜಿವಿಜಿ ಹುಟ್ಟು ಹಾಕಿದ ವೃತ್ತಿ ನಿರತ ಪತ್ರಕರ್ತರ ಸಂಘ, ಇಂದು ಎಂಟು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಬೃಹತ್ ಸಂಘಟನೆಯಾಗಿದ್ದು, ತೊಂಬತ್ತೊಂದು ವಸಂತಗಳು ತುಂಬಿದ ಸಂಭ್ರಮದಲ್ಲಿದೆ ಎಂದರು.
ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 500 ಕೋಟಿ ಮೀಸಲಿಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಪತ್ರಕರ್ತರ ಮೇಲೆ ಕಾಳಜಿ ತೋರಿಸಿ ಬೇಡಿಕೆ ಈಡೇರಿಸಲು ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿರುವುದನ್ನು ಕೆಯುಡಬ್ಲ್ಯೂಜೆ ಅಭಿನಂದಿಸುತ್ತದೆ ಎಂದರು.
ನಿವೃತ್ತ ಪತ್ರಕರ್ತರ ಪಿಂಚಣಿಯನ್ನು12 ಸಾವಿರಕ್ಕೆ ಹೆಚ್ಚು ಮಾಡಿಕೊಟ್ಟಿರುವುದಕ್ಕಾಗಿ ಧನ್ಯವಾದಗಳು. ಪತ್ರಕರ್ತರ ಇನ್ನುಳಿದ ಬೇಡಿಕೆಗಳನ್ನು ಆದ್ಯತೆ ಮೇಲೆ ಈಡೇರಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
೧. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಿಕೊಡಬೇಕು.
೨. ಪತ್ರಕರ್ತರನ್ನು ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು.
೩. ಪತ್ರಕರ್ತರ ಪಿಂಚಣಿಗೆ ಕಠಿಣ ಷರತ್ತು ವಿಧಿಸಿರುವುದನ್ನು ಸಡಿಲಿಸಿ, ಸರಳೀಕರಣ ಮಾಡಬೇಕು. ಈ ಮೊದಲಿದ್ದಂತೆ ಖಜಾನೆ ಮೂಲಕವೇ ಮಾಸಾಶನ ಪಾವತಿಯಾಗಬೇಕು.
೪. ತಾಲ್ಲೂಕು ಮಟ್ಟದಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು
೫. ಸ್ಥಳೀಯ ಸಂಸ್ಥೆಗಳು, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪತ್ರಕರ್ತರಿಗೆ ನಿವೇಶನ/ಮನೆಗಳನ್ನು ಶೇ.50 ರಿಯಾಯಿತಿ ದರದಲ್ಲಿ ಕೊಡಬೇಕು.
೬. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ ಮೀಸಲಿಡಬೇಕು.
೭. ಜಿಲ್ಲಾ, ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಿಗೆ ಮತ್ತು ಮಾಧ್ಯಮಗಳಿಗೆ ಕ್ರಮಬದ್ದವಾಗಿ ಜಾಹೀರಾತು ನೀಡಬೇಕು.
೮. ಜಾಹೀರಾತುಗಳನ್ನು ಈ ಮೊದಲಿದ್ದಂತೆ ವಾರ್ತಾ ಇಲಾಖೆ ಮತ್ತು ಸರ್ಕಾರಿ ಏಜೆನ್ಸಿ ಮೂಲಕವೇ ನಿಭಾಯಿಸಬೇಕು.
೯. ಪತ್ರಿಕಾ ವಿತರಕರಿಗಾಗಿ ಹಿಂದೆ ಬಜೆಟ್ ನಲ್ಲಿ ಮೀಸಲಿಟ್ಟ 2 ಕೋಟಿ ಯಲ್ಲಿ ನಯಾಪೈಸೆ ಬಳಕೆಯಾಗಿಲ್ಲ. ಅದನ್ನು ಕಾರ್ಮಿಕ ಇಲಾಖೆ ಮೂಲಕ ನಿರ್ವಹಣೆ ಮಾಡಬೇಕು ಮತ್ತು ಪತ್ರಿಕಾ ವಿತರಕರ ಕ್ಷೇಮ ನಿಧಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.