ಭಾರತೀಯ ರೈಲ್ವೆಯ ಉದ್ಯೋಗ ಪಡೆದರೆ ಲೈಫ್ ಸೆಟಲ್ಡ್ ಎಂಬ ಮನೋಭಾವ ದೇಶದ ಬಹುಸಂಖ್ಯಾತ ಯುವಜನತೆಗೆ ಇದೆ. ಅದು ನಿಜವೇ ಈ ಇಲಾಖೆಯ ಹುದ್ದೆಗಳು ಕೇವಲ ಕೇಂದ್ರ ಸರ್ಕಾರಿ ಉದ್ಯೋಗ ಮಾತ್ರವಲ್ಲದೇ, ಇಲ್ಲಿನ ಸೌಲಭ್ಯಗಳು ಎಂತಹ ವಿದ್ಯಾರ್ಹತೆಯುಳ್ಳವರನ್ನು ಆಕರ್ಷಿಸುತ್ತವೆ.
ಇಂದು ಗ್ರಾಮ ಪಂಚಾಯ್ತಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಇಂಜಿನಿಯರ್ ಓದಿರುವವರು ಅರ್ಜಿ ಹಾಕಲು ಮುಂದಾಗುತ್ತಾರೆ ಎಂದರೆ, ಇನ್ನು ರೈಲ್ವೆಯ ಯಾವುದೇ ಹುದ್ದೆಗೆ ಅರ್ಜಿ ಹಾಕಲು ಹಿಂದೆ ಸರಿಯುತ್ತಾರಾ. ಖಂಡಿತ ಇಲ್ಲ. ರಾಜ್ಯ ಸರ್ಕಾರಿಯ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅಷ್ಟು ಬೇಡಿಕೆ ಇರಬೇಕಾದರೆ ಇನ್ನು ರೈಲ್ವೆಯ ಕೇಂದ್ರ ಸರ್ಕಾರಿ ಖಾಯಂ ಹುದ್ದೆಗೆ ಇನ್ನೆಷ್ಟು ಬೇಡಿಕೆ ಇರುವುದಿಲ್ಲ ಹೇಳಿ.
ಅಂದಹಾಗೆ ಈಗ ಭಾರತೀಯ ನಿರುದ್ಯೋಗಿ ಪ್ರಜೆಗಳಿಗೆ ಬಹುದೊಡ್ಡ ಗುಡ್‌ನ್ಯೂಸ್ ಎಂದರೆ ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) ಈ ವರ್ಷ ಸುಮಾರು 2 ಲಕ್ಷ ಹುದ್ದೆಗಳ ಭರ್ತಿ ಮಾಡುವ ಸಾಧ್ಯತೆ ಇದೆಯಂತೆ. ಇದಕ್ಕೆ ಪೂರಕವಾಗಿ ಈಗಾಗಲೇ ರೈಲ್ವೆ ಇಲಾಖೆಯು 5696 ಅಸಿಸ್ಟಂಟ್ ಲೋಕೋಪೈಲಟ್ ಹುದ್ದೆಗಳು, 9000 ಟೆಕ್ನೀಷಿಯನ್ ಹುದ್ದೆಗಳು, ರೈಲ್ವೆ ಸುರಕ್ಷತಾ ಪಡೆಯ 4660 ಎಸ್‌ಐ ಹಾಗೂ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅಧಿಸೂಚಿಸಿ ಅರ್ಜಿ ಆಹ್ವಾನಿಸಿದೆ. ಒಟ್ಟು ಈಗಾಗಲೇ 19,356 ಹುದ್ದೆಗಳಿಗೆ ಅರ್ಜಿ ಸ್ವೀಕಾರ ಮಾಡಿದೆ ಎಂದಾಯ್ತು. ಉಳಿದ 180000 ಹುದ್ದೆಗಳ ಭರ್ತಿಗೆ ಸಂಬಂಧ ಅಧಿಸೂಚನೆಗೆ ಪೂರಕ ಮಾಹಿತಿಯು ಈಗಾಗಲೇ ರೈಲ್ವೆ ಇಲಾಖೆಯಿಂದ ಹೊರಬಿದ್ದಿದೆ.
ರೈಲ್ವೆ ಇಲಾಖೆಯು ಮುಂದಿನ ಜುಲೈ ಹಾಗೂ ಸೆಪ್ಟೆಂಬರ್ ನಡುವೆ ನಾಲ್ಕು ಕೆಟಗರಿ ಹುದ್ದೆಗಳಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡುವ ಕುರಿತು ತನ್ನ ನೇಮಕಾತಿ ವೇಳಾಪಟ್ಟಿಯಲ್ಲಿ ಹೇಳಿದೆ. ಈ ಕುರಿತು ಈಗಾಗಲೇ ವಿಕ>> ಉದ್ಯೋಗ ಸೆಕ್ಷನ್‌ನಲ್ಲಿ ಮಾಹಿತಿ ನೀಡಲಾಗಿತ್ತು. ಮುಂದುವರೆದು ಈಗ ಯಾವ್ಯಾವ ಹುದ್ದೆ ಎಷ್ಟು ಸಂಖ್ಯೆಯಲ್ಲಿ ನಿರೀಕ್ಷಿಸಬಹುದು ಎಂಬುದರ ಕುರಿತು ಕೆಲವು ಮೂಲಗಳಿಂದ ದೊರೆತಿದೆ.
ರೈಲ್ವೆ ಇಲಾಖೆಯಿಂದ ಮುಂದಿನ ಜುಲೈ -ಸೆಪ್ಟೆಂಬರ್ ತಿಂಗಳ ನಡುವೆ ಯಾವೆಲ್ಲ ಹುದ್ದೆ, ಎಷ್ಟು ಹುದ್ದೆಗಳಿಗೆ ನೇಮಕ ನೋಟಿಫಿಕೇಶನ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂಬುದನ್ನು ಕೆಳಗಿನಂತೆ ತಿಳಿಸಲಾಗಿದೆ.
ಹುದ್ದೆ ಹೆಸರು ನಿರೀಕ್ಷಿತ ಹುದ್ದೆಗಳ ಸಂಖ್ಯೆ
ಆರ್‌ಆರ್‌ಬಿ ಎನ್‌ಟಿಪಿಟಿ ಹುದ್ದೆಗಳು 20,000 ಕ್ಕೂ ಹೆಚ್ಚು.
ಆರ್‌ಆರ್‌ಬಿ ಜೂನಿಯರ್ ಇಂಜಿನಿಯರ್ ಹುದ್ದೆಗಳು 10,000ಕ್ಕೂ ಹೆಚ್ಚು.
ಆರ್‌ಆರ್‌ಬಿ ಪ್ಯಾರಾಮೆಡಿಕಲ್ ಹುದ್ದೆಗಳು 4000 ಕ್ಕೂ ಹೆಚ್ಚು.
ಆರ್‌ಆರ್‌ಬಿ ಗ್ರೂಪ್ ಡಿ ಹುದ್ದೆಗಳು 1,00,000 ಕ್ಕೂ ಹೆಚ್ಚು
ಅಕ್ಟೋಬರ್-ಡಿಸೆಂಬರ್ ತಿಂಗಳಲ್ಲಿ ಸಹ ನೇಮಕ ಅಧಿಸೂಚನೆ
ರೈಲ್ವೆ ಇಲಾಖೆ ಈ ವರ್ಷದ ಕೊನೆ ಮೂರು ತಿಂಗಳಲ್ಲಿ ಅಂದರೆ ಅಕ್ಟೋಬರ್ ಹಾಗೂ ಡಿಸೆಂಬರ್ ಅವಧಿಯಲ್ಲಿ ರೈಲ್ವೆಯ ಲೆವೆಲ್ 1 ಹಾಗೂ ಮಿನಿಸ್ಟೇರಿಯಲ್ ಹಾಗೂ ಇಸೋಲೆಟೆಡ್ ಕೆಟಗರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿದೆ.
ರೈಲ್ವೆಯ ನೇಮಕಾತಿ ಕ್ಯಾಲೆಂಡರ್ ಪ್ರಕಾರ ಅಂದಾಜಿಸುವುದಾದಲ್ಲಿ ಖಂಡಿತ ಈ ವರ್ಷ ಸುಮಾರು 2 ಲಕ್ಷ ನೇರ ನೇಮಕಾತಿ ಖಾಯಂ ಹುದ್ದೆಗಳನ್ನೇ ಭರ್ತಿ ಮಾಡುವ ಎಲ್ಲ ಸಾಧ್ಯತೆಗಳು ಇವೆ. ಸರ್ಕಾರಿ ಹುದ್ದೆ ಬೇಕಾದವರು ನೇಮಕಾತಿ ಹಂತಗಳಾದ ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ಸ್ಕಿಲ್ ಟೆಸ್ಟ್‌ಗಳಿಗೆ ಸಕಲ ಸಿದ್ಧತೆ ನಡೆಸಿಕೊಳ್ಳಿ.
ಆರ್‌ಆರ್‌ಬಿ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ ಹುದ್ದೆಗಳ ಪೈಕಿ ಪದವಿ ಮಟ್ಟದ ಹುದ್ದೆಗಳು, ಪದವಿಗಿಂತ ಕೆಳಮಟ್ಟದ ಹುದ್ದೆಗಳು ಎರಡು ಸಹ ಇವೆ. ಒಟ್ಟಾರೆ ಈ ಹುದ್ದೆಗಳಿಗೆ ದ್ವಿತೀಯ ಪಿಯುಸಿ, ಯಾವುದೇ ಪದವಿ, ಡಿಪ್ಲೊಮ, ಐಟಿಐ, ಬಿಇ, ಬಿ.ಟೆಕ್ ಹಾಗೂ ಗ್ರೂಪ್ ಡಿ ಹುದ್ದೆಗಳಿಗೆ ಎಸ್‌ಎಸ್ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು.
ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯಸ್ಸು 33 ವರ್ಷ ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.