ಬೆಂಗಳೂರು
13,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಆಯ್ಕೆಯಾದವರಿಗೆ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿ ನೀಡಿದ್ದು ಸಿಂಧುತ್ವ ಪ್ರಮಾಣ ಪತ್ರ ಪಡೆಯದೇ ಇದ್ದಲ್ಲಿ ನೇಮಕಾತಿಗೆ ಅವಕಾಶವಿಲ್ಲ ಎಂದಿದೆ.
ಆಯ್ಕೆ ಪಟ್ಟಿಯಲ್ಲಿ ಇತರೆ ಮೀಸಲಾತಿ ಕೋರಿ ಸಾಮಾನ್ಯ ವರ್ಗದಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಂದ ಸಿಂಧುತ್ವ ಪ್ರಮಾಣ ಪತ್ರ ಪಡೆಯವ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಎಲ್ಲಾ ಜಿಲ್ಲಾ ಉಪನಿರ್ದೇಶಕರು ಮತ್ತು ನೇಮಕಾತಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ-2022 ರ 1:1 ಅಂತಿಮ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ನೈಜತೆಯ ಪ್ರಮಾಣ ಪತ್ರಗಳನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಕೈಗೊಳ್ಳಲು ಸೂಚಿಸಲಾಗಿತ್ತು. ಅದರಂತೆ, ಅಭ್ಯರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಸಿಂಧುತ್ವ ಪಡೆಯುವ ಕುರಿತಾಗಿ ಉಲ್ಲೇಖ(1) ರಲ್ಲಿ ಮತ್ತು ರಾಜ್ಯದ ಹಲವು ಜಿಲ್ಲೆಗಳ ನೇಮಕಾತಿ ಪ್ರಾಧಿಕಾರಿಗಳು ಸ್ಪಷ್ಟನೆ ಕೋರಿರುತ್ತಾರೆ. ಈ ಕುರಿತಾಗಿ ಉಲ್ಲೇಖ(2) ರಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆರವರು ಸ್ಪಷ್ಟನೆ ನೀಡಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಟಿಪ್ಪಣಿಯಂತೆ ಇತರೆ ಮೀಸಲಾತಿ ಕೋರಿ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದಲ್ಲಿ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆ ಅಥವಾ ಇತರೆ ಯಾವುದೇ ಮೀಸಲಾತಿಯನ್ನು ಪಡೆದಿರುವ ಕುರಿತು ಪರಿಶೀಲಿಸಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.
ಆದುದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ (ನೇಮಕಾತಿ, ಮೀಸಲಾತಿ ಇತ್ಯಾದಿ) ನಿಯಮಗಳು-1992 ರನ್ವಯ ನೇರ ನೇಮಕಾತಿಯಲ್ಲಿ ಮೀಸಲಾತಿಯಡಿ ಅರ್ಜಿ ಸಲ್ಲಿಸಿ ತದನಂತರ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದಲ್ಲೂ ಸಿಂಧುತ್ವ ಪತ್ರವನ್ನು ಪಡೆಯದೇ ನೇಮಕಾತಿಗೆ ಅವಕಾಶವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮೀಸಲಾತಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಸಾಮಾನ್ಯ ವರ್ಗದಡಿ ಆಯ್ಕೆಯಾದ ಸಂದರ್ಭದಲ್ಲಿಯೂ ಅವರುಗಳ ಎಲ್ಲಾ ಮೀಸಲಾತಿ ಕೋರಿಕೆಗಳಿಗೆ ಸಂಬಂಧಿಸಿದಂತೆ ಸಿಂಧುತ್ವ ಪರಿಶೀಲನಾ ಪ್ರಮಾಣ ಪತ್ರಗಳನ್ನು ಪಡೆಯುವುದು ಅಗತ್ಯವಾಗಿರುತ್ತದೆ ಎಂದು ತಿಳಿಸಲಾಗಿದೆ.