ಬಾಗಲಕೋಟೆ
ಜಿಲ್ಲೆಯ ಐಡಿಬಿಐ ಬ್ಯಾಂಕ್‌ನಲ್ಲಿ ಪ್ರವಾಸೋದ್ಯಮ ಜಿಲ್ಲಾ ಅಭಿವೃದ್ದಿ ಸಮಿತಿ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆಯಾದ ಬಗ್ಗೆ ಪ್ರಕರಣದ ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ದ ಸೂಕ್ತ ಕಾನುನು ಕ್ರಮ ಕೈಗೊಳ್ಳಲಾಗುವುದೆಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಸಚಿವರು ಈ ಪ್ರಕರಣದಲ್ಲಿ ಒಟ್ಟು ಬ್ಯಾಂಕಿನ ೯ ನೌಕರರು ಹಾಗೂ ೩೩ ಜನ ಖಾಸಗಿ ವ್ಯಕ್ತಿಗಳು ಭಾಗಿಯಾಗಿದ್ದು ತನಿಖೆಯಿಂದ ತಿಳಿದು ಬಂದಿದೆ. ಬ್ಯಾಂಕಿನ ನೌಕರರ ಪೈಕಿ ೩ ಜನ ಹಾಗೂ ಖಾಸಗಿ ವ್ಯಕ್ತಿ ೬ ಜನ ಸೇರಿ ಒಟ್ಟು ೯ ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಉಳಿದವರನ್ನು ಕೂಡಲೇ ವಶಕ್ಕೆ ಪಡೆಯುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಪೊಲೀಸ್ ತನಿಖೆ ವೇಳೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿಯ ಒಟ್ಟು ೩ ಬ್ಯಾಂಕ್ ಖಾತೆಗಳಲ್ಲಿ ಒಟ್ಟು ೫೪ ಬಾರಿ ಹಣ ವರ್ಗಾವಣೆಗೊಂಡಿರುತ್ತದೆ. ಒಟ್ಟು ೨.೭೭ ಕೋಟಿ ರೂ.ಗಳ ಅವ್ಯವಹಾರವಾಗಿದ್ದು, ಬ್ಯಾಂಕಿನವರು ವಾರದಲ್ಲಿ ಹಣವನ್ನು ಸೆಟೆಲ್‌ಮೆಂಟ್ ಮಾಡುವುದಾಗಿ ತನಿಖೆ ವೇಳೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದ್ದಾರೆ. ಅಲ್ಲದೆ ತನಿಖೆಯಲ್ಲಿ ಅಲ್ಪಸಂಖ್ಯಾತರ ಇಲಾಖೆಗೆ ಸಂಬಂಧಿಸಿದ ಖಾತೆಯಿಂದ ೮೦ ಲಕ್ಷ ರೂ., ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗದ ಖಾತೆಯಿಂದ ೮೬.೪೦ ಲಕ್ಷ, ಕೈಮಗ್ಗ ಮತ್ತು ಮತ್ತು ಜವಳಿ ಇಲಾಖೆ ಖಾತೆಯಿಂದ ೧೭.೮೪ ಲಕ್ಷ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆಯಿಂದ ೧.೭೭ ಕೋಟಿ ರೂ.ಗಳು ಅಕ್ರಮವಾಗಿ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ. ಹಿಂದುಳಿದ ವರ್ಗಗಳ ಇಲಾಖೆಯಿಂದ ಎಫ್.ಐ.ಆರ್ ಸಹ ಮಾಡಲಾಗಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ಕಚೇರಿಯಿಂದ ವಿವಿಧ ಯೋಜನೆಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಖಾತೆಯಲ್ಲಿ ಉಳಿದಿರುವ ಮೊತ್ತದ ಮಾಹಿತಿ ಕೇಳಲಾಗಿತ್ತು. ಈ ಹಿನ್ನಲೆಯಲ್ಲಿ ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆಯಲು ಅಧಿಕಾರಿಗಳು ಮುಂದಾದಾಗ ಅಕ್ರಮ ಹಣದ ವರ್ಗಾವಣೆಯ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಯ ಬ್ಯಾಂಕ್ ಮಾಹಿತಿ ಪಡೆದುಕೊಳ್ಳಲಾಗಿದೆ. ಅವ್ಯಹಾರ ನಡೆದಿರುವುದು ಕಂಡುಬಂದಿದೆ. ಇದಕ್ಕಾಗಿ ನಿರ್ದೇಶಕರು ಕಚೇರಿಯಿಂದ ಪರಿಶೀಲನಾ ತಂಡ ಸಹ ನೇಮಿಸಲಾಗಿದೆ ಎಂದು ಸಚಿವರು ತಿಳಿಸಿದರು.
*೩ ಹಂತಗಳಲ್ಲಿ ಐಹೊಳೆ ಸಂಪೂರ್ಣ ಸ್ಥಳಾಂತರ*
ಐತಿಹಾಸಿಕ ಪ್ರವಾಸಿ ತಾಣವಾದ ಐಹೊಳೆ ಗ್ರಾಮ ಸಂಪೂರ್ಣವಾಗಿ ಸ್ಥಳಾಂತರಗೊಂಡಾಗ ಮಾತ್ರ ವೈಭವ ಬರಲು ಸಾಧ್ಯವಾಗುತ್ತದೆ. ಪ್ರತಿ ಗುಡಿಗಳು ಪುನರ್ ಅಭಿವೃದ್ದಿಗೊಳ್ಳಬೇಕು. ಒಟ್ಟು ೬೨೫ ಕುಟುಂಬಗಳನ್ನು ಬೇರೆಗೆ ಸ್ಥಳಾಂತರಿಸಬೇಕಿದೆ. ಈ ಪೈಕಿ ಮೊದಲ ಹಂತವಾಗಿ ೧೨೫ ಮನೆಗಳ ಸ್ಥಳಾಂತರಕ್ಕೆ ಈಗಾಗಲೇ ೧೩.೧೧ ಎಕರೆ ಭೂಮಿ ಖರೀದಿ ಮಾಡಲಾಗಿದೆ. ಉಳಿದ ಕುಟುಂಬಗಳ ಸ್ಥಳಾಂತರಕ್ಕೆ ಸಂಪೂರ್ಣ ಮಾಹಿತಿ ಹಾಗೂ ಎಸ್ಟಿಮೇಟ್‌ದೊಂದಿಗೆ ಪ್ರಸ್ತಾವನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಬೇಕು. ಎರಡು ಹಂತಗಳಲ್ಲಿ ಸ್ಥಳಾಂತರಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕರಾದ ಎಚ್.ವಾಯ್.ಮೇಟಿ, ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಸಿಇಓ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಗೋಪಾಲ ಹಿತ್ತಲಮನಿ ಸೇರಿದಂತೆ ಇತರರು ಇದ್ದರು.