ನಿಮ್ಮ ಸುದ್ದಿ ಬಾಗಲಕೋಟೆ
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್‌ಲೈನ್ ವ್ಯವಸ್ಥೆ ಅಷ್ಟೊಂದು ಸೂಕ್ತವಲ್ಲ, ಕೂಡಲೆ ಶಾಲೆ ತರಗತಿಗಳಲ್ಲಿ ನೇರವಾಗಿ ಶಿಕ್ಷಕರು ನೀಡುವ ಪಾಠದ ವ್ಯವಸ್ಥೆ ಆಗಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಂದಾನೆಪ್ಪ ಕೊಣ್ಣೂರ ಆಗ್ರಹಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಯೋಜನೆಯ ಅಕ್ಕಿ ವಿತರಿಸಿ ಅವರು ಮಾತನಾಡಿದರು. ಸರಕಾರ ಮಕ್ಕಳ ಹೊಟ್ಟೆ ತುಂಬಿಸಲು ಅನ್ನ ನೀಡುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಆನ್‌ಲೈನ್ ಪಾಠಕ್ಕೂ ವ್ಯವಸ್ಥೆ ಮಾಡಿದೆ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ದೂರದರ್ಶನ ಹಾಗೂ ಆನ್‌ಲೈನ್ ಪಾಠಗಳು ಅಷ್ಟೊಂದು ಸಮಂಜಸವೆನಿಸುತ್ತಿಲ್ಲ. ಸರಕಾರ ಈ ಬಗ್ಗೆ ಚಿಂತಿಸಿ ಶಾಲಾ ತರಗತಿಗಳಲ್ಲಿ ನೇರವಾಗಿ ಶಿಕ್ಷಕರು ನೀಡುವ ಪಾಠಕ್ಕೆ ವ್ಯವಸ್ಥೆ ಮಾಡುವಂತಾಗಬೇಕು ಎಂದು ಆಗ್ರಹಿಸಿದರು.
ಮುಖ್ಯಗುರು ಎ.ಐ.ಕಂಬಳಿ, ಇಲಾಖೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳುತ್ತದೆ. ಪಾಲಕರು, ಮಕ್ಕಳಿಗೆ ಆನ್‌ಲೈನ್‌ನಲ್ಲಿನ ಪಾಠಗಳನ್ನು, ಶಿಕ್ಷಕರು ವಾಟ್ಸಾಪ್ ಮೂಲಕ ನೀಡುವ ಕಲಿಕಾ ಮೌಲ್ಯಮಾಪನದ ಕ್ವಿಜ್ ಚಟುವಟಿಕೆಗಳನ್ನು ನಿರ್ವಹಿಸಲು ಉತ್ತೇಜಿಸಬೇಕು ಎಂದರು.
ಶಿಕ್ಷಕರಾದ ಅಶೋಕ ಬಳ್ಳಾ, ಬಿ.ಬಿ.ವಾಲೀಕಾರ, ಎಸ್.ಜಿ.ಪಾಟೀಲ, ಎಂ.ಜಿ.ಬಡಿಗೇರ, ಎಸ್.ಎಸ್.ಲಾಯದಗುಂದಿ, ಎಸ್.ಎಲ್.ಕಣಗಿ ಇತರರು ಇದ್ದರು.