ಗದಗ: ಸೂರ್ಯಚಂದ್ರ ಇರುವವರೆಗೂ ಲಂಬಾಣಿ ಸಮುದಾಯ ಎಸ್‌ಸಿ ಮೀಸಲು ಪ್ರವರ್ಗದಲ್ಲಿ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಹರದಗಟ್ಟಿ ಗ್ರಾಮದಲ್ಲಿ ಲಂಬಾಣಿ ಸಮುದಾಯದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಸಮುದಾಯಗಳ ಅಭಿವೃದ್ಧಿ ಆದಾಗ ಮಾತ್ರ ಭಾರತ ಅಭಿವೃದ್ದಿ ಆಗುತ್ತದೆ. 2008 ರಲ್ಲಿ ಯಡಿಯೂರಪ್ಪ ಅವರ ಕಾಲದಲ್ಲಿ ನಾನು ಸಿ.ಎಂ. ಉದಾಸಿ ಅವರು ಸೇರಿ ತಾಂಡಾ ಅಭಿವೃದ್ಧಿ ನಿಗಮ ಮಾಡುವಂತೆ ಒತ್ತಾಯ ಮಾಡಿದ್ದೇವು ಎಂದರು.
ಆಗ ಆರಂಭವಾದ ತಾಂಡಾ ಅಭಿವೃದ್ಧಿ ನಿಗಮದಿಂದ ತಾಂಡಾಗಳಲ್ಲಿ ಸೇವಾಲಾಲ್ ಭವನ, ರಸ್ತೆ ಸೇರಿದಂತೆ ಸಾಕಷ್ಡು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಲಮಾಣಿ ಸಮುದಾಯವನ್ನು ಎಸ್ಸಿಯಿಂದ ಕೈ ಬಿಡಬೇಕು ಎಂದು ಕಾಂಗ್ರೆಸ್ ಮಹಾನಾಯಕ ತನ್ನ ಶಿಷ್ಯನ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಸೂರ್ಯ ಚಂದ್ರ ಇರುವವರೆಗೂ ಲಂಬಾಣಿ ಸಮುದಾಯ ಎಸ್ಸಿ ಪಟ್ಟಿಯಲ್ಲಿರುತ್ತದೆ. ಅದು ಈಗ ಕೋರ್ಟ್ ನಲ್ಲಿದೆ. ನಾನು ಸಂಸತ್ ಸದಸ್ಯನಾದ ಮೇಲೆ ನಿಮ್ಮ ಪರವಾಗಿ ಕೋರ್ಟ್‌ನಲ್ಲಿ ಹೋರಾಟ ಮಾಡಿದ್ದೇನೆ ಎಂದು ಹೇಳಿದರು.
ಲಂಬಾಣಿ ಸಮುದಾಯ ಸುಸಂಸ್ಕೃತ ಸಮುದಾಯ. ಈ ಸಮುದಾಯ ತಾಂಡಾಗಳಲ್ಲಿ ಇರುವುದರಿಂದ ಅವಕಾಶಗಳು ಸಿಗುತ್ತಿಲ್ಲ. ಈ ಸಮುದಾಯದ ಮಕ್ಕಳು ಬಹಳ ಬುದ್ದಿವಂತರಿದ್ದಾರೆ. ಕಾಶ್ಮಿರದಿಂದ ಕನ್ಯಾಕುಮಾರಿವರೆಗೂ ಇರುವ ಕೆಲವೇ ಸಮುದಾಯಗಳಲ್ಲಿ ಬಂಜಾರ ಸಮುದಾಯವೂ ಒಂದು. ಈ ಸಮುದಾಯ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ಈ ಸಮುದಾಯದ ತಾಯಂದಿರಿಗೆ ಅಭಿನಂದನೆಗಳು ಎಂದು ಸೂಚಿಸಿದರು.