ವಿಜೇತರಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನ ವಿತರಣೆ
ಬಾಗಲಕೋಟೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಮಹಾತ್ಮಾಗಾಂಧೀಯವರ 155ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಬುಧವಾರ ವಿತರಿಸಿದರು.
ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ನಡೆದ ಗಾಂಧೀ ಹಾಗೂ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರೌಡಶಾಲಾ ವಿಭಾಗದಲ್ಲಿ ಬೋಡನಾಯಕದಿನ್ನಿ ಸರಕಾರಿ ಪ್ರೌಡಶಾಲೆಯ ಸುರಕ್ಷಾ ಆದಾಪೂರ (ಪ್ರಥಮ), ಯಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪೃಥ್ವಿ ಬಗಲಿ (ದ್ವಿತೀಯ), ವಿದ್ಯಾಗಿರಿ ಸೆಂಟ್ ಅನ್ನಿಸ್ ಕಾಂನ್ವೆಂಟ್ ಹೈಸ್ಕೂಲಿನ ಗಿರಿಧರ ಬಿ.ಬಿ (ತೃತೀಯ) ಬಹುಮಾನ ಪಡೆದುಕೊಂಡರು.
ಪಿಯುಸಿ ವಿಭಾಗದಲ್ಲಿ ಹುನ್ನೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಐಶ್ವರ್ಯ ಗಾಣಿಗೇರ (ಪ್ರಥಮ), ಇಳಕಲ್ಲ ಎಸ್.ವಿ.ಎಂ ಮಹಿಳಾ ಪಿಯು ಕಾಲೇಜಿನ ವಿಜಯಲಕ್ಷ್ಮೀ ಮಡಿವಾಳರ (ದ್ವಿತೀಯ) ಹಾಗೂ ಮುಧೋಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸ್ವಾತಿ ದೊಡಮನಿ (ತೃತೀಯ) ಸ್ಥಾನ ಪಡೆದುಕೊಂಡರು.
ಪದವಿ, ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಜಮಖಂಡಿ ರಾಣಿ ಚೆನ್ನಮ್ಮ ವಿವಿ ಸ್ನಾತಕೋತ್ತರ ಕೇಂದ್ರದ ಮಹಾಂತೇಶ ಕೋಷ್ಠಿ (ಪ್ರಥಮ), ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾವ್ಯ ಚಿಪ್ಪಲಕಟ್ಟು (ದ್ವಿತೀಯ), ದ್ಯಾಮಣ್ಣ ಕಂಬಾರ (ತೃತೀಯ) ಬಹುಮಾನ ಪಡೆದುಕೊಂಡರು.
ಗಾಂಧೀ ಜಯಂತಿ ಅಂಗವಾಗಿ ರಾಜ್ಯದ ಪ್ರತಿ ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲಾ, ಪಿಯುಸಿ, ಪದವಿ-ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು, ಇದರಲ್ಲಿ ಪ್ರತಿ ವಿಭಾಗಕ್ಕೆ ಪ್ರತ್ಯೇಕವಾಗಿ ನಾಲ್ಕು ವಿಷಯಗಳನ್ನು ಪ್ರಬಂಧ ಸ್ಪರ್ಧೆಗೆ ನೀಡಲಾಗಿತ್ತು,
ಅದರಲ್ಲಿ ವಿದ್ಯಾರ್ಥಿಗಳು ತಮಗೆ ಇಷ್ಟವಾದ ವಿಷಯವನ್ನು ಆಯ್ದುಕೊಂಡು ಪ್ರಬಂಧ ಬರೆಯಲು ಅವಕಾಶ ನೀಡಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೂರು ವಿಭಾಗದ ತಲಾ ಮೂರು ಅತ್ಯುತ್ತಮ ಪ್ರಬಂಧಗಳನ್ನು ರಾಜ್ಯ ಮಟ್ಟಕ್ಕೆ ನಾಮನಿರ್ದೇಶನ ಮಾಡಲಾಗಿದೆ.
ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ವಾರ್ತಾಧಿಕಾರಿ ಕಸ್ತೂರಿ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.