ಬಾಗಲಕೋಟೆ
ವಿಭಿನ್ನ ಪ್ರಯತ್ನಗಳ ಮೂಲಕ ಬೋಧನೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಹಾಲಿಂಗಪುರದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಎಸ್‌ಸಿಪಿ ಪಪೂ ಕಾಲೇಜ್‌ನ ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕಿ ಸಪನಾ ಶ್ರೀಶೈಲ ಅನಿಗೋಳ ರಾಷ್ಟ್ರಮಟ್ಟದ ಶಿಕ್ಷಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಶಾಲೆಯಲ್ಲಿ 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಸಪನಾ ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿಯೊಂದಿಗೆ ಅವರ ಶ್ರೇಯೋಭಿವೃದ್ಧಿಗೂ ಶ್ರಮಿಸಿದ್ದಾರೆ. ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳ ಮನೆಗೆ ಭೇಟಿ ನೀಡಿ ಪಾಲಕರ ಮನವೊಲಿಸುವುದರ ಜತೆಗೆ ಅಗತ್ಯವಿದ್ದವರಿಗೆ ಸಹಾಯವನ್ನೂ ಮಾಡಿ ಆ ಮಕ್ಕಳ ಕಲಿಕೆಯ ಪಯಣ ನಿಲ್ಲದಂತೆ ನೋಡಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಪಾಲಕರಿಗೆ ಶಿಕ್ಷಣದ ಮಹತ್ವ, ಸರಕಾರದ ಸೌಲಭ್ಯಗಳ ಮಾಹಿತಿ ನೀಡಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೇರೇಪಿಸಿದ್ದಾರೆ.
ಬೋಧನೆಯಲ್ಲಿ ತಂತ್ರಜ್ಞಾನ:
ಆಧುನಿಕ ಬೋಧನಾ ಕೌಶಲ್ಯ ಕರಗತ ಮಾಡಿಕೊಂಡು ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಮಾರ್ಟ್‌ೋನ್, ಶೈಕ್ಷಣಿಕ ಆ್ಯಪ್ ಬಳಸಿ ಸ್ಮಾರ್ಟ್ ಕ್ಲಾಸ್ ಮಾಡುವ ಮೂಲಕ ಮಕ್ಕಳಲ್ಲಿ ಕಲಿಕೆಯ ಕೌತುಕ ಮೂಡಿಸಿದ್ದಾರೆ. ವಿಜ್ಞಾನದ ಪ್ರಯೋಗ, ಪ್ರೊಜೆಕ್ಟ್‌ಗಳನ್ನು ತಯಾರಿಸುವ ಕೌಶಲ್ಯ ಬೆಳೆಸುತ್ತಿದ್ದಾರೆ. ಪ್ರತಿ ವರ್ಷ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನ, ವಿಚಾರಗೋಷ್ಠಿ, ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಹಲವು ಬಾರಿ ಪ್ರಶಸ್ತಿ ಪಡೆಯಲು ಮಾರ್ಗದರ್ಶನ ನೀಡಿದ್ದಾರೆ.
ಸಂಪನ್ಮೂಲ ಶಿಕ್ಷಕಿ:
ಚಂದನವಾಹಿನಿಯಲ್ಲಿ ಪ್ರೌಢಶಾಲಾ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಸಿದ್ಧಪಡಿಸುವ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಿದ್ದಾರೆ. ಸಿಕಂದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ಶಿಕ್ಷಕರ ವಿಜ್ಞಾನ ವಿಭಾಗದ ವಸ್ತು ಪ್ರದರ್ಶನದಲ್ಲಿ ಹಿಂದೂಸ್ತಾನ್ ಏರೋನೆಟಿಕ್ ವಿಶೇಷ ಪ್ರಶಸ್ತಿ ಪಡೆದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಎಸ್ಸೆಸೆಲ್ಸಿ ವಿದ್ಯಾರ್ಥಿಗಳು 2019ರಲ್ಲಿ ದಿಲ್ಲಿಯಲ್ಲಿ ಇನಸ್ಪಾಯರ್ ಅವಾರ್ಡ್ ಪಡೆದಿದ್ದಾರೆ. ವಿಜ್ಞಾನ ಕ್ಲಬ್, ಇಕೋ ಕ್ಲಬ್ ಮೂಲಕ ಜಾಗತಿ ಕಾರ್ಯಕ್ರಮದಿಂದ ಪರಿಸರ ಸಂರಕ್ಷಣೆ ಜವಾಬ್ದಾರಿ ಮೂಡಿಸಿದ್ದಾರೆ. ಮಕ್ಕಳಿಗೆ ದಿನಪತ್ರಿಕೆ, ವಾರಪತ್ರಿಕೆ, ಬಾಲವಿಜ್ಞಾನ ಪತ್ರಿಕೆ ಪರಿಚಯಿಸಿ ಓದುವ ಹವ್ಯಾಸ ಬೆಳೆಸಿದ್ದಾರೆ.
ಪ್ಲಾಸ್ಟಿಕ್ ವಿರುದ್ಧ ಅಭಿಯಾನ:
15 ವರ್ಷಗಳಿಂದ ‘ಅವೈಡ್ ಪ್ಲಾಸ್ಟಿಕ್, ಅಡಾಪ್ಟ್ ಕಾಟನ್’ ಎಂಬ ಅಭಿಯಾನ ಆರಂಭಿಸಿ ಉಚಿತ ಕಾಟನ್ ಚೀಲ ನೀಡುವ ಮೂಲಕ ಪರಿಸರ ಜಾಗತಿ ಮೂಡಿಸಿದ್ದಾರೆ. ಸ್ಕೌಟ್ಸ್ ಕ್ಯಾಪ್ಟನ್ ಆಗಿ ಮಕ್ಕಳಲ್ಲಿ ಲ್‌ೈ ಸ್ಕಿಲ್, ಆಂಬ್ಯುಲೆನ್ಸ್‌ಘಿ, ಸ್ಟ್ ಏಡ್ ತರಬೇತಿ ನೀಡಿದ್ದಾರೆ.
———–
ಕೋವಿಡ್‌ನಲ್ಲಿ ಮಕ್ಕಳ ಮನೆಗೆ
ಶಾಲೆಗೆ ಭೌತಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಶಿಕ್ಷಕಿ ಸಪನಾ ಅವರು ಬೋಧನೆ – ಕಲಿಕೆ ಪ್ರಕ್ರಿಯೆಯಲ್ಲಿ ತಾಲೂಕು, ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್ ರಜೆ ವೇಳೆ ಮಕ್ಕಳ ಮನೆ ಬಾಗಿಲಿಗೆ ಹೋಗಿ ವಿದ್ಯಾಭ್ಯಾಸ ಮಾಡಿಸಿ, ಆರ್ಥಿಕ ಹಿಂದುಳಿದ ಮಕ್ಕಳಿಗೆ, ತೋಟದಲ್ಲಿನ ಮಕ್ಕಳಿಗೆ ಸ್ಟಡಿ ಕಿಟ್ ತಲುಪಿಸಿದ್ದಾರೆ.
———
ಹಲವು ಪ್ರಶಸ್ತಿ
ಶಿಕ್ಷಣ ಕ್ಷೇತ್ರದ ಅಪಾರ ಸೇವೆ ಗುರುತಿಸಿ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಶಿಕ್ಷಕಿ ಸಪನಾ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿವೆ. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಜತೆಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯೂ ಇವರಿಗೆ ಲಭಿಸಿದೆ. ಈಗ ಇವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ.
————
ವಿಜ್ಞಾನ ವಿಷಯವನ್ನು ಪ್ರ್ಯಾಕ್ಟಿಕಲ್ ಆಗಿ ಮಕ್ಕಳಿಗೆ ಮನಮುಟ್ಟಿಸಿದ ತೃಪ್ತಿ ನನಗಿದೆ. ಮುಖ್ಯ ಶಿಕ್ಷಕರ ಮಾರ್ಗದರ್ಶನ, ಸಹೋದ್ಯೋಗಿಗಳ ಸಹಕಾರ, ವಿದ್ಯಾರ್ಥಿಗಳ ಆಸಕ್ತಿ, ನನ್ನ ಪತಿಯ ಪ್ರೋತ್ಸಾಹವೇ ಸಾಧನೆಗೆ ಪ್ರೇರಣೆ. ಪ್ರಶಸ್ತಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ.
– ಸಪನಾ ಶ್ರೀಶೈಲ ಅನಿಗೋಳ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ, ಕೆಎಲ್‌ಇ ಪ್ರೌಢಶಾಲೆ, ಮಹಾಲಿಂಗಪುರ
———
ಶಿಕ್ಷಕರೇ ಕಟ್ಟಿದ ಹೆಮ್ಮೆಯ ಶಿಕ್ಷಣ ಸಂಸ್ಥೆ ನಮ್ಮದು. ಕೆಎಲ್‌ಇ ಪ್ರೌಢಶಾಲೆಯ ಶಿಕ್ಷಕಿ ಸಪನಾ ಅವರು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದ್ದು ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಸಮರ್ಪಣೆಯ ಸೇವೆಗೆ ಸಿಕ್ಕ ಗೌರವಕ್ಕೆ ಅಭಿನಂದನೆ.
– ಡಾ.ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷರು, ಕೆಎಲ್‌ಇ ಶಿಕ್ಷಣ ಸಂಸ್ಥೆ ಬೆಳಗಾವಿ