ಬಾಗಲಕೋಟೆ
ಬಾಲ್ಯವಿವಾಹ ಹಾಗೂ ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆಗಳ ಸಮರ್ಪಕ ಅನುಷ್ಠಾನದಲ್ಲಿ ಕಾಯ್ದೆಗಳ ಕುರಿತು ಅರಿವು ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯ ನೇರಳೆ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಸೋಮವಾರ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಬಾಲ್ಯವಿವಾಹ ಮುಕ್ತ ಅಭಿಯಾನ, ಪ್ರಸವ ಪೂರ್ಣ ಹೆಣ್ಣು ಭ್ರೂನ ಹತ್ಯೆ ನಿಷೇಧ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಯ್ದೆಗಳ ಅನುಷ್ಠಾನದಲ್ಲಿ ಸಂಪೂರ್ಣ ಅರಿವು ಇರಬೇಕಾಗುತ್ತದೆ. ಪ್ರಾಮಾಣಿಕ, ಜವಾಬ್ದಾರಿಯುತವಾಗಿ ಕೆಲಸ ಮಾಡಿದಲ್ಲಿ ಬಾಲ್ಯವಿವಾಹದಂತಹ ಅನಿಷ್ಟ ಪದ್ದತಿಗಳನ್ನು ತೊಡೆದು ಹಾಕಲು ಸಾದ್ಯ. ಸರಿಯಾದ ವಯಸ್ಸಿನಲ್ಲಿ ಮದುವೆಯಾಗದೇ ಬಾಲ್ಯಾವಸ್ಥೆಯಲ್ಲಿ ಮದುವೆಯಾದಲ್ಲಿ ಆ ಬಾಲಕಿಯ ಶಿಕ್ಷಣ ನಿಂದು ಹೋಗುವದರ ಜೊತೆಗೆ ಆರೋಗ್ಯಯುತವಾಗಿ ಬೆಳೆಯಲು ಸಾಧ್ಯವಾಗುವದಿಲ್ಲ. ಇದರಿಂದ ಉತ್ತಮ ಸಾಮಾಜ ನಿರ್ಮಾಣ ಮಾಡಲು ಸಾಧ್ಯವಾಗುವದಿಲ್ಲ. ಕಾಯ್ದೆ ಅನುಷ್ಠಾನದಲ್ಲಿ ಜವಾಬ್ದಾರಿಯನ್ನು ಅರಿವು ಕೆಲಸ ಮಾಡಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ದೇಶದ ಅಭಿವೃದ್ದಿ ಹೊಂದಲು ಸೂಚ್ಯಂಕ ಮುಖ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಜನರ ಆರೋಗ್ಯ, ಉತ್ತಮ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯದ ಜೊತೆಗೆ ಸಾಮಾಜಿಕ ಪಿಡುಗಾದ ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆಗಳ ನಿರ್ಮೂಲನೆ ಕೂಡಾ ಅಭಿವೃದ್ದಿಯಲ್ಲಿ ಮುಖ್ಯವಾಗುತ್ತವೆ. ಕಳೆದ ವರ್ಷದಲ್ಲಿ ರಾಜ್ಯದಲ್ಲಿ 2841 ಬಾಲ್ಯವಿವಾಹ ಪ್ರಕರಣಗಳಲ್ಲಿ 400 ಎಫ್‍ಐಆರ್ ಆಗಿದ್ದು, ವಿವಿಧ ಹಂತದಲ್ಲಿವೆ. ಇಂತಹ ಬಿಡುಗು ನಿರ್ಮೂಲನೆಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಮಾತನಾಡಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಬಾಲ್ಯವಿವಾಹ ಆಗುತ್ತಿರುವ ಬಗ್ಗೆ ಮಾಹಿತಿ ನಿಮಗಿರುತ್ತದೆ. ಆದರೂ ಸಹ ನಿರ್ಮೂಲನೆ ಯಾಕೆ ಆಗುತ್ತಿಲ್ಲ ಎಂಬ ಪ್ರಶ್ನೆ ಉದ್ಬವಾಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡದವರ ವಿರುದ್ದ ವಿಮರ್ಶೆ ನಡೆಸಲಾಗುತ್ತದೆ. ಅಭಿವೃದ್ದಿಯಲ್ಲಿ ಮಹಿಳಾ ಸ್ಥಾನಮಾನ, ಲಿಂಗಾನುಪಾತ ಗನನೆಗೆ ಬರುತ್ತವೆ. ಆದ್ದರಿಂದ ಉತ್ತಮ ಆದರ್ಶ ಸಮಾಜ ನಿರ್ಮಾಣ ಮಾಡಿ, ಜಿಲ್ಲೆಗೆ ಅಂಟಿದ ಕಳಂಕವನ್ನು ಹೋಗಲಾಡಿಸಲು ಎಲ್ಲರೂ ಸನ್ನದ್ದರಾಗಬೇಕಿದೆ ಎಂದರು.
ಪ್ರಾರಂಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾಂರ್ಯದರ್ಶಿ ದ್ಯಾವಪ್ಪ ಎಸ್.ಬಿ ಪ್ರಾಸ್ತಾವಿಕವಾಗಿ ಮಾತನಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ತೊಡಗಾಗಿರುವ ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆಗಳಂತಹ ಅನಿಷ್ಟಗಳನ್ನು ನಿರ್ಮೂಲನೆ ಮಾಡಬೇಕಿದೆ. ಇಂತ ಅನಿಷ್ಟ ಪದ್ದತಿ ನಿರ್ಮೂಲನೆಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದ್ದು, ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್ಲ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀಶೈಲ ಹಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಆಶಾ ಮಲ್ಲಾಪೂರ, ಡಾ.ರುದ್ರೇಶ ಹಲವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.