ಬಾಗಲಕೋಟೆ:
ಎಚ್.ಐ.ವಿ, ಏಡ್ಸ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ ನಿಯಂತ್ರಣಕ್ಕೆ ತರಲು ಸಾದ್ಯವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಹೇಳಿದರು.
ನಗರದ ಬಸವೇಶ್ವರ ಇಂಜೀನಿಯರಿಂಗ್ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಮಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಚ್.ಐ.ವಿ ಪೀಡಿತರನ್ನು ಸಮಾನವಾಗಿ ಕಾಣಬೇಕು. ಪ್ರಾರಂಭದಲ್ಲಿಯೇ ಪರೀಕ್ಷೆಗೆ ಒಳಪಡಿದಾಗ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಚಿಕತ್ಸೆಯಿಂದ ಗುಣಮುಖವಾಗಿ ಇರುವವರು ಇತರರಿಗೆ ಮಾದರಿಯಾಗಬೇಕು. ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಅದರಲ್ಲೂ ಯುವಕರು ಜಾಗೃತರಾಗಿ ಮುಂದೆ ಎಚ್.ಐ.ವಿ, ಏಡ್ಸ್ ನಿಂದಾಗುವ ಅಪಾಯವನ್ನು ಅರಿತು ತಡೆಗಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಯುವಜನ ಮಾದಕ ವಸ್ತುಗಳಿಂದ ದೂರವಿರಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಲು ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಎಚ್.ಐ.ವಿ ನಿಯಂತ್ರಣ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದ 10 ಜನ ಮಹನೀಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಎಸ್.ಜಂಗಮಶೆಟ್ಟಿ, ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಉಪನ್ಯಾಸಕರಾದ ಡಾ.ಪ್ರಮೀಳಾದೇವಿ ಆರ್, ಭಾರತಿ ಮೇಟಿ, ಹಿರಿಯ ಆರೋಗ್ಯ ವೈದ್ಯಾಧಿಕಾರಿ ಡಾ.ಅನೀಲ ಮಳಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಿಲ್ಲಾ ಮೇಲ್ವಿಚಾರಕ ಎಂ.ಎಚ್.ಸುಭೇದಾರ ಸ್ವಾಗತಿಸಿದರು. ಎಚ್.ಆರ್.ಮರ್ದಿ ನಿರೂಪಿಸಿ ಕೊನೆಗೆ ವಂದಿಸಿದರು.