ಬಾಗಲಕೋಟೆ:
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ಬೀದಿನಾಟಕ ಹಾಗೂ ಸಂಗೀತ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್ಲ ಹೇಳಿದರು.
ನವನಗರದ ಪತ್ರಿಕಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಾದ್ಯಮ ಮಿತ್ರರಿಗೆ ಆರೋಗ್ಯ ಇಲಾಖೆಯ ಎನ್.ಎಚ್.ಎಮ ಯೋಜನೆಗಳ ಬಗ್ಗೆ ಹಮ್ಮಿಕೊಂಡ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾದ್ಯಮದವರ ಮೂಲಕ ಆರೋಗ್ಯ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಜಾನಪದ ಕಲಾತಂಡಗಳ ಮೂಲಕ ಗ್ರಾಮೀಣ ಭಾಷೆಯಲ್ಲಿಯೇ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕೋವಿಡ್ ಸಹ ಪ್ರಾರಂಭವಾಗಿದ್ದು, ಯಾವುದೇ ರೀತಿಯ ಭಯ ಪಡದೆ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ವಯಸ್ಸಾದವರು, ಧೀರ್ಘ ಕಾಯಿಲೆಗೆ ಒಳಗಾದವರು ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಧಲಬಂಜನ ಮಾತನಾಡಿ ದಿನವೀಡಿ ಕಾರ್ಯದಲ್ಲಿ ತೊಡಗಿದ ಪತ್ರಕರ್ತರಿಗೆ ಆರೋಗ್ಯದ ಕಾರ್ಯಕ್ರಮಗಳ ಅರಿವು ಮೂಡಿಸುವದರ ಜೊತೆಗೆ ಆರೋಗ್ಯ ತಪಾಸಣೆ ಕೈಗೊಂಡಿರುವುದು ಉತ್ತಮ ಕಾರ್ಯವಾಗಿದೆ ಎಂದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಸುರೇಶ ಹಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ.ಪಟ್ಟಣಶೆಟ್ಟಿ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಶಿವನಗೌಡ ಪಾಟೀಲ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಕಲಾ ಶಿನ್ನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಪತ್ರಕರ್ತರ ಆರೋಗ್ಯ ತಪಾಸಣೆ ಮಾಡಲಾಯಿತು.