ಚಿತ್ರದುರ್ಗ: ಗ್ಯಾರಂಟಿ ಭ್ರಮೆಯಲ್ಲಿ ಮುಳುಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ರಾಜ್ಯದ ಜನರ ನೆತ್ತಿ ಮೇಲೆ ಹೊರೆ ಹೊರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 9 ತಿಂಗಳಿನಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಸರ್ಕಾರ ಇದೆ. ಅನುದಾನ ಬಿಡುಗಡೆ ಬಗ್ಗೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆಗೆ ಚುನಾವಣೆಯಲ್ಲಿಯೇ ತಕ್ಕ ಉತ್ತರ ನೀಡಿ ಅಂಕಿ ಅಂಶ ಬಿಡುಗಡೆ ಮಾಡುತ್ತೇವೆ ಎಂದರು.
ರಾಜ್ಯದಾದ್ಯಂತ ಬಿಜೆಪಿ ಹಾಗೂ ಮೋದಿಯವರ ಪರ ವಾತಾವರಣವಿದೆ ಹಾಸನ ಮೈಸೂರು ಸೇರಿದಂತೆ ಹಲವೆಡೆ ನಾಮಪತ್ರ ಸಲ್ಲಿಸಿ ಚಿತ್ರದುರ್ಗಕ್ಕೆ ಬಂದಿದ್ದು ರಾಜ್ಯದಲ್ಲಿ ವಾತಾವರಣ ಹೇಗಿದೆ ಎಂಬುದು ಗೊತ್ತಾಗಿದೆ. ರಾಜ್ಯದ ಭೀಕರ ಬರ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಯಾವ ಮುಖ ಇಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದಾರೋ ಗೊತ್ತಾಗುತ್ತಿಲ್ಲ. ರಾಜ್ಯದಲ್ಲಿ 850 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ ಪ್ರಚಾರಕ್ಕೆ ಚಿತ್ರದುರ್ಗಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಪ್ರಯಾಣಿಸಿದ ಹೆಲಿಕಾಪ್ಟರ್‌ನ್ನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಂ.ಕಾರ್ತಿಕ್ ಪರಿಶೀಲನೆ ನಡೆಸಿದರೆ, ಗೌತಮ್ ಅವರ ನಾಮಪತ್ರ ಸಲ್ಲಿಕೆಗಾಗಿ ಕೋಲಾರಕ್ಕೆ ತೆರಳಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ.
ರೈತರು ಬಡವರ ಪಾಲಿಗೆ ಸತ್ತಂತೆ ಆಗಿದೆ. ಬರದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ ಸರ್ಕಾರ ಇಳಿದಿದೆ. ದಲಿತರ ಎಸ್ಸಿಪಿ, ಟಿಎಸ್ಪಿ 24 ಸಾವಿರ ಕೋಟಿ ವರ್ಗಾವಣೆ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನೆಡೆ ಆಗಿದ್ದರೂ ಈ ಬಾರಿ ಜನ ನಮ್ಮನ್ನ ಕೈ ಹಿಡಿಯುತ್ತಾರೆ. ದೇಶದ ಸುಭದ್ರತೆ ದೃಷ್ಟಿಯಿಂದ ಜನ ಬಿಜೆಪಿಗೆ ಮತ ಕೊಡುತ್ತಾರೆ. ನಾವು 28 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.