ಬಾಗಲಕೋಟೆ
ಗ್ರಾಮೀಣ ಕ್ರೀಡೆಯಾಗಿರುವ ಸೈಕಲ್ ಸವಾರಿ ಇಂದು ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದು, ಬಾಗಲಕೋಟೆ ಸೈಕ್ಲಿಸ್ಟಗಳ ತವರು ಜಿಲ್ಲೆಯಾಗಿ ಪರಿಣಮಿಸಿದೆ ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.
ನವನಗರದ ಯುನಿಟ್-2ರಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿಯ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬಾಗಲಕೋಟೆ ಜಿಲ್ಲೆ ತನ್ನದೇ ಆದ ವಿವಿಧ ಕ್ರೀಡೆಗಳಲ್ಲಿ ವಿಶಿಷ್ಟವಾದ ಛಾಪನ್ನು ಮೂಡಿಸಿದೆ. ಕಬಡ್ಡಿ, ಕೋಕೋ, ಮಲ್ಲಕಂಬಗಳಂತಹ ಕ್ರೀಡೆಗಳಲ್ಲಿ ಹೆಸರು ತಂದಿದೆ. ಜಿಲ್ಲೆಯ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಿದೆ ಎಂದರು.
ಜಿಲ್ಲೆಯ ಸೈಕ್ಲಿಸ್ಟಗಳು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಅವರಿಗೆ ಆರೋಗ್ಯದ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು. ಸೈಕಲ್ ಸವಾರಿ ಮಾಡುವಾಗ ರಸ್ತೆಯಲ್ಲಿ ಬಿದ್ದು, ತೊಂದರೆಯಾದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವ ಕೆಲಸ ಇಲಾಖೆಯಿಂದ ಆಗಬೇಕು. ಅದಕ್ಕೆ ಬೇಕಾದ ಅನುದಾನ ಸರಕಾರದಿಂದ ಕೊಡಿಸುವ ಕೆಲಸ ಮಾಡಲಾಗುವುದು. ಕ್ರೀಡಾಪಟುಗಳು ನಮ್ಮ ಜಿಲ್ಲೆಯ ಆಸ್ತಿ ಎಂಬ ಭಾವನೆ ಇಟ್ಟುಕೊಂಡು ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಇಲಾಖೆಯ ಜವಾಬ್ದಾರಿಯಾಗಿದೆ. ಸರಕಾರದಿಂದ ಕ್ರೀಡಾಪಟುಗಳಿಗೆ ಎಲ್ಲ ಸೌಕರ್ಯಗಳನ್ನು ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಅಮೇಚೂರ್ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ರಾಜು ಬಿರಾದಾರ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಕುರಣಿ, ದಾರವಾಡ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಸರಶೆಟ್ಟಿ, ಬಾಗಲಕೋಟೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.