ಈ ಬೇರುಗಳನ್ನು ಗಟ್ಟಿಗೊಳಿಸುವ ಜವಾಬ್ದಾರಿ ಜಿಲ್ಲೆಯ ಪತ್ರಕರ್ತರ ಮೇಲಿದೆ: ಕೆವಿಪಿ
ಪ್ರಜಾಪ್ರಭುತ್ವ ವಚನ ಚಳವಳಿಯ ಅಂತರಾಳ
ಬಾಗಲಕೋಟೆ
ಗಾಂಧಿವಾದ ಮತ್ತು ಸಮಾಜವಾದಿ ಆಶಯಗಳು ಆಳವಾಗಿ ಬೇರೂರಿರುವ ನೆಲ ಬಾಗಲಕೋಟೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಬೇರುಗಳನ್ನು ಗಟ್ಟಿಗೊಳಿಸುವ ಜವಾಬ್ದಾರಿ ಜಿಲ್ಲೆಯ ಪತ್ರಕರ್ತರ ಮೇಲಿದೆ.
ಪ್ರಜಾಪ್ರಭುತ್ವ ವಚನ ಚಳವಳಿಯ ಅಂತರಾಳ. ಬಾಗಲಕೋಟೆ ಸೂಫಿ-ಶರಣರ-ವಚನ ಚಳವಳಿಯ ನಾಡು. ಪ್ರಜಾಪ್ರಭುತ್ವದ ಸ್ಥಾಪನೆ ಮತ್ತು ರಕ್ಷಣೆ ವಚನ ಚಳವಳಿಯ ಆಶಯವೂ ಆಗಿದೆ. ಇದು ಪತ್ರಿಕಾ ವೃತ್ತಿಯ ಹೊಣೆಗಾರಿಕೆಯೂ ಆಗಿದೆ ಎಂದರು.
ನಾನು ಮುಖ್ಯಮಂತ್ರಿಗಳ ಜೊತೆಗಿದ್ದ ಈ ಹತ್ತು ವರ್ಷಗಳಲ್ಲಿ ನಾನು ಗಮನಿಸಿರುವುದು ಏನೆಂದರೆ, ಮುಖ್ಯಮಂತ್ರಿಗಳಿಗೆ ಭಾಗಲಕೋಟೆ ಜಿಲ್ಲೆಗೆ ಹೋಗೋದು ಅಂದರೆ ತಮ್ಮ ತವರು ಜಿಲ್ಲೆ ಮೈಸೂರಿಗೆ ಹೋದಷ್ಟೇ ಸಂಭ್ರಮ ಪಡುತ್ತಾರೆ. ವಿಧಾನಸೌಧದಲ್ಲಿ ಬಾದಾಮಿಯವರು ಕಂಡರೆ ಕಾರು ನಿಲ್ಲಿಸಿ ಹತ್ತಿರಕ್ಕೆ ಕರೆದು ಆತ್ಮೀಯವಾಗಿ ಮಾತನಾಡುತ್ತಾರೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಪತ್ರಕರ್ತರು ತಮ್ಮ ಹಾಗೂ ಕುಟುಂಬದ ಆರೋಗ್ಯದ ಕಡೆಗೂ ಗಮನ ಹರಿಸಿ ಎಂದು ಕಿವಿ ಮಾತು ಹೇಳಿದ ಪ್ರಭಾಕರ್ ಅವರು, ಬಡ ಮತ್ತು ನಿಜವಾದ ವೃತ್ತಿಪರ ಪತ್ರಕರ್ತ ಕುಟುಂಬಗಳ ಯೋಗಕ್ಷೇಮಕ್ಕಾಗಿ ಒಂದು ಉತ್ತಮವಾದ ಯೋಜನೆ ರೂಪಿಸುವ ಅಗತ್ಯವಿದೆ. ಆ ದಿಕ್ಕಿನಲ್ಲಿ ಪ್ರಯತ್ನಗಳು ಸಾಗಿವೆ ಎಂದರು.
ಮುಂದಿನ 15-20 ದಿನಗಳಲ್ಲಿ ಕಾರ್ಯನಿರತ ಗ್ರಾಮೀಣ ಪತ್ರಕರ್ತರ ಕೈಗೆ ಉಚಿತ ಬಸ್ ಪಾಸ್ ಸಿಗುವ ಸಿದ್ಧತೆಗಳು ಮುಗಿದಿವೆ. ಕಾರ್ಯ ಮರೆತ ಪತ್ರಕರ್ತರು ಮತ್ತು ವೃತ್ತಿ ತೊರೆದ ಪತ್ರಕರ್ತರು ಸರ್ಕಾರದ ಈ ಯೋಜನೆ ದುರುಪಯೋಗ ಆಗದಂತೆ ಸಹಕರಿಸಿ ಎಂದು ಮನವಿ ಮಾಡಿದರು.
*ಸರ್ಕಾರಿ ನಿವೇಶನ ಬಗ್ಗೆ ಸಚಿವರ ಜೊತೆ ಚರ್ಚಿಸಿದ ಕೆವಿಪಿ*
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ. ತಿಮ್ಮಾಪುರ ಅವರ ಜೊತೆ ಚರ್ಚಿಸಿದ ಪ್ರಭಾಕರ್ ಅವರು ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ಕೊಡಿಸುವ ಬಗ್ಗೆ ವಿನಂತಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ತಿಮ್ಮಾಪುರ್ , ಜಿಲ್ಲಾಧಿಕಾರಿ ಜಾನಕಿ, ಸಿಇಓ ಕುರೇನ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.