ಬೆಂಗಳೂರು: ಸಾಗುವಳಿ ಭೂ ಮಂಜೂರಾತಿಗಾಗಿ ಬಗರ್ ಹುಕುಂ (ಅಕ್ರಮ ಸಕ್ರಮ) ಯೋಜನೆಯ ಅಡಿ ತಿರಸ್ಕೃತಗೊಂಡ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನದಲ್ಲಿ ಭರವಸೆ ನೀಡಿದರು.
ಅಲ್ಲದೇ ಬಗರ್ ಹುಕುಂ ಅಡಿ ಒಬ್ಬರಿಂದಲೇ 25 ಅರ್ಜಿ ಸಲ್ಲಿಸಿರೋ ಶಾಕಿಂಗ್ ಮಾಹಿತಿ ಸದನದ ಮುಂದೆ ಬಿಚ್ಚಿಟ್ಟಿದ್ದು,
ಸೋಮವಾರ ಪ್ರಶ್ನೋತ್ತರ ಅವಧಿಯ ವೇಳೆ ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಬಗರ್ ಹುಕುಂ ಯೋಜನೆ ಅಡಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಅನರ್ಹಗೊಂಡ ಅರ್ಜಿಗಳ ಸಂಖ್ಯೆ ಎಷ್ಟು? ಮತ್ತು ಅನರ್ಹಗೊಳಿಸಲು ಕಾರಣವೇನು? ಎಂದು ಪ್ರಶ್ನಿಸಿದ್ದರು.
ಬಡವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಜಾರಿಗೆ ತಂದಿರುವ ಬಗರ್ ಹುಕುಂ ಯೋಜನೆಯನ್ನು ಅನೇಕರು ಉದ್ದೇಶಪೂರ್ವಕವಾಗಿ ದುರುಪಯೋಗಗೊಳಿಸುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಷಾದ ವ್ಯಕ್ತಪಡಿಸಿದರು.
ಕೆಲವರು ಬಗರ್ ಹುಕುಂ ಜಮೀನು ಮಂಜೂರಾತಿಗೆ 25ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದು, ಕಾನೂನಿನ ಪ್ರಕಾರ ಅರ್ಜಿದಾರರಿಗೆ 2005ಕ್ಕೆ ಕನಿಷ್ಠ 18 ವರ್ಷವಾಗಿರಬೇಕು.ಈಗ 18 ವರ್ಷವಾದವರೂ ಅರ್ಜಿ ಸಲ್ಲಿಸಿದ್ದಾರೆ. ನಮೂನೆ 57ರ ಅಡಿಯಲ್ಲಿ ಒಟ್ಟಾರೆ 9,85,000 ಅರ್ಜಿಗಳು ಸಲ್ಲಿಕೆಯಾಗಿವೆ. ಜಮೀನು ಮಂಜೂರು ಮಾಡಬೇಕೆಂದರೆ 54 ಲಕ್ಷ ಎಕರೆ ಜಮೀನಿನ ಅಗತ್ಯವಿದೆ. ಆದರೆ, ರಾಜ್ಯದಲ್ಲಿ ಸರ್ಕಾರಿ ಜಮೀನೆ ಅಷ್ಟಿಲ್ಲ.