This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Agriculture NewsLocal NewsPolitics NewsState News

ಬರ ತಾಲೂಕು ಘೋಷಣೆ 1 ವಾರ ಮುಂದಕ್ಕೆ; 134 ತಾಲೂಕಲ್ಲಿ ಮತ್ತೆ ಜಂಟಿ ಸಮೀಕ್ಷೆ!

ಬರ ತಾಲೂಕು ಘೋಷಣೆ 1 ವಾರ ಮುಂದಕ್ಕೆ; 134 ತಾಲೂಕಲ್ಲಿ ಮತ್ತೆ ಜಂಟಿ ಸಮೀಕ್ಷೆ!

ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳ ಜನ ಮಳೆ (Rain News) ಇಲ್ಲದೆ ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಬರ ತಾಲೂಕುಗಳ ಘೋಷಣೆಗೆ ರಾಜ್ಯ ಸರ್ಕಾರದಿಂದ ಸಿದ್ಧತೆಗಳು ನಡೆದಿವೆ. ಆದರೆ, ಈಗ ರಾಜ್ಯದಲ್ಲಿ ಬರ ತಾಲೂಕುಗಳ ಘೋಷಣೆಯು ಇನ್ನೂ ಒಂದು ವಾರ ಮುಂದಕ್ಕೆ ಹೋಗಿದೆ. ಈ ಮೊದಲು 113 ತಾಲೂಕುಗಳು “ಬರಪೀಡಿತ” (Drought hit taluka) ಎಂದು ಸಚಿವ ಸಂಪುಟದ ಸಬ್ ಕಮಿಟಿ ನಿರ್ಧಾರ ಮಾಡಿತ್ತು. ಆದರೆ, ಕೇಂದ್ರ ಸರ್ಕಾರದ (Central Government) ಮಾನದಂಡದ ಅನುಸಾರ ಕೇವಲ 62 ತಾಲೂಕುಗಳು ಮಾತ್ರ ಬರ ತಾಲೂಕು ಘೋಷಣೆಗೆ ಒಳಪಡುತ್ತವೆ. ಹೀಗಾಗಿ ಬಾಕಿ ಉಳಿದ 51 ಹಾಗೂ ನೂತನವಾಗಿ ಬರದ ಸಾಲಿಗೆ ಸೇರ್ಪಡೆಗೊಂಡಿರುವ 83 ತಾಲೂಕುಗಳ ಸ್ಥಿತಿಗತಿಗಳನ್ನು ಇನ್ನೊಂದು ವಾರದೊಳಗೆ ಕಂದಾಯ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ (Revenue Agriculture and Rural Development Department) ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸಿ, ಅದರ ವರದಿಯನುಸಾರ ಬರ ತಾಲೂಕುಗಳ ಘೋಷಣೆಗೆ ನಿರ್ಧಾರ ಮಾಡಲಾಗಿದೆ.

ಕಂದಾಯ ಸಚಿವ ಕೃಷ್ಣಬೈರೇಗೌಡ (Revenue Minister Krishna Byre Gowda) ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸೋಮವಾರ ನಡೆದ ಕ್ಯಾಬಿನೆಟ್ ಸಬ್ ಕಮಿಟಿ ಸಭೆಯಲ್ಲಿ ಬರ ತಾಲೂಕು ಘೋಷಣೆಗೆ ಸಂಬಂಧಪಟ್ಟಂತೆ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಕೃಷಿ ಸಚಿವ ಚೆಲುವರಾಯಸ್ವಾಮಿ (Agriculture Minister Cheluvarayaswamy), ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Rural Development Minister Priyank Kharge) ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಬರ ಘೋಷಣೆ ದಿನದಿಂದ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚಿಸುವ ಹಾಗೂ ಕುಡಿಯುವ ನೀರು ಕೊರತೆ ಪೂರೈಸಲು ಬಾಡಿಗೆ ಬೋರ್‌ವೆಲ್ ಮೂಲಕ ನೀರು ಪೂರೈಸಲು ತೀರ್ಮಾನವನ್ನು ಈ ಸಭೆಯಲ್ಲಿ ಕೈಗೊಳ್ಳಲಾಯಿತು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸದ್ಯ 529 ಕೋಟಿ ರೂಪಾಯಿ ಲಭ್ಯ ಇದೆ. ಪ್ರಕೃತಿ ವಿಕೋಪ ನಿಧಿ ಹಾಗೂ ಆರ್‌ಡಿಪಿಆರ್ ಇಲಾಖೆಯಲ್ಲೂ ಹಣ ಇದೆ. ಇನ್ನು ಬರ ಪರಿಸ್ಥಿತಿ ಹಾಗೂ ಮಾನದಂಡಗಳ ಸರಳೀಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮೇವು, ಬಿತ್ತನೆ ಬೀಜ ಕಿಟ್ ವಿತರಿಸಲು ಪಶುಸಂಗೋಪನೆ ಇಲಾಖೆಗೆ 20 ಕೋಟಿ ರೂಪಾಯಿಯನ್ನು ವಿತರಣೆ ಮಾಡಲು ತೀರ್ಮಾನಿಸಲಾಗಿದೆ.

ಮರು ಸಮೀಕ್ಷೆಗೆ ತೀರ್ಮಾನ: ಸಚಿವ ಕೃಷ್ಣ ಬೈರೇಗೌಡ
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಶೇಕಡಾ 26ರಷ್ಟು ಮಳೆ ಕೊರತೆ ಇದೆ. ಆಗಸ್ಟ್‌ 22ರಂದು ಸಬ್ ಕಮಿಟಿ ಮಾಡಿ 113 ತಾಲೂಕುಗಳನ್ನು ಬರಪೀಡಿತ ಎಂದು ತೀರ್ಮಾನ ಮಾಡಿದ್ದೆವು. ಆದರೆ, ಕೇಂದ್ರ ಸರ್ಕಾರದ ಮಾನದಂಡದ ಅನುಸಾರ ಈಗ 62 ತಾಲೂಕುಗಳು ಮಾತ್ರ ಬರ ಘೋಷಣೆಗೆ ಅರ್ಹವಾಗಿವೆ. ಹೀಗಾಗಿ ಉಳಿದ 51 ತಾಲೂಕುಗಳಲ್ಲಿ ಮತ್ತೊಮ್ಮೆ ಬೆಳೆ ಸಮೀಕ್ಷೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಇದು 113 ತಾಲೂಕಿಗೆ ಸಂಬಂಧಪಟ್ಟ ತೀರ್ಮಾನವಾಗಿದೆ. ಉಳಿದ 83 ತಾಲೂಕುಗಳಲ್ಲಿ ಕಳೆದ ತಿಂಗಳು ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ಎರಡು ಕಡ್ಡಾಯ ಮಾನದಂಡದಂತೆ ಬರ ತಾಲೂಕುಗಳ ಪಟ್ಟಿಯಲ್ಲಿ ಇವುಗಳು ಸಹ ಸೇರಿಕೊಂಡಿವೆ. ಹೀಗಾಗಿ 134 ತಾಲೂಕುಗಳಲ್ಲಿ ಮತ್ತೆ ಬೆಳೆ ಸಮೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ವಾರದ ಒಳಗೆ ಬೆಳೆ ಸಮೀಕ್ಷೆ ಮುಗಿಸಿ ವರದಿ ಕೊಡಲು ಸೂಚಿಸಿದ್ದೇವೆ. ಹೀಗಾಗಿ ಈ 62 ತಾಲೂಕುಗಳ ಜತೆಗೆ ಈ ವಾರದಲ್ಲಿ ಕೊಡುವ ರಿಪೋರ್ಟ್ ಆಧರಿಸಿ ಬರ ತಾಲೂಕುಗಳ ಪಟ್ಟಿಯನ್ನು ಮುಂದಿನ ವಾರ ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಘೋಷಣೆಗೆ ಅಡ್ಡಿಯಾದ ಚಲುವರಾಯಸ್ವಾಮಿ!
ಈಗಿನ ವರದಿಯಂತೆ ಕೇಂದ್ರದ ಮಾನದಂಡದ ಅನುಸಾರ 62 ತಾಲೂಕುಗಳ ಹೆಸರನ್ನು ಬರ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧತೆ ನಡೆದಿತ್ತು. ಆದರೆ, ಸಭೆಯಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ, ರಾಜ್ಯದ ಪರಿಸ್ಥಿತಿ ಬೇರೆಯೇ ಇದೆ. ಅಲ್ಲದೆ, ನಾನು ಖುದ್ದು ಹಲವು ಕಡೆ ಭೇಟಿ ನೀಡಿದ್ದೇನೆ. ಪರಿಸ್ಥಿತಿಗಳು ಬೇರೆಯೇ ಇದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಇದರ ಜತೆಗೆ ಇನ್ನು ಮುಂದೆ ಯಾವ ಪ್ರದೇಶದಲ್ಲಿ ಮಳೆಯಾದರೂ ಆ ಪ್ರದೇಶಗಳನ್ನು ಬರ ಅಲ್ಲ ಎಂದು ಪರಿಗಣಿಸಲು ಅಧಿಕಾರಿಗಳು ಮುಂದಾಗಬಾರದು. ಕಾರಣ, ಈಗಾಗಲೇ ಬೆಳೆ ಬಿತ್ತುವ ಅವಧಿ ಮುಗಿದು ಹೋಗಿದೆ. ಬಿತ್ತನೆ ಮಾಡಿಯಾದ ಮೇಲೆ ಮಳೆ ಇಲ್ಲದೆ, ಬೆಳೆಗಳು ಒಣಗಿವೆ. ಈ ಹಿನ್ನೆಲೆಯಲ್ಲಿ ಇನ್ನು ಮಳೆಯಾಯಿತು ಎಂಬ ಕಾರಣಕ್ಕೆ ಆ ವಿಷಯ ಬರ ತಾಲೂಕು ಘೋಷಣೆಗೆ ಅಡ್ಡಿಯಾಗಬಾರದು. ಈ ವಿಷಯವನ್ನು ಎಲ್ಲ ಅಧಿಕಾರಿಗಳು ನೆನಪಿನಲ್ಲಿಡಬೇಕು ಎಂಬ ಸೂಚನೆಯನ್ನು ಈ ಸಭೆಯಲ್ಲಿ ನೀಡಲಾಗಿದೆ.

ಬರ ತಾಲೂಕು ಘೋಷಣೆಯಾದರೆ?
ಬರ ತಾಲೂಕು ಎಂದು ಘೋಷಣೆಯಾದ ತಕ್ಷಣ, ಆ ಇಡೀ ತಾಲೂಕನ್ನು ಬರಪೀಡಿತ ಎಂದು ಪರಿಗಣಿಸಲಾಗುವುದಿಲ್ಲ. ಆ ತಾಲೂಕಿನ ಯಾವ ಭಾಗದಲ್ಲಿ ಬರ ಇದೆಯೋ ಅವುಗಳನ್ನು ಮಾತ್ರವೇ ಪರಿಗಣಿಸಲಾಗುವುದು. ಅವು ಮಾತ್ರ ಕೇಂದ್ರ ಸರ್ಕಾರದ ಮಾನದಂಡದ ಅನುಸಾರ ಪ್ರಯೋಜನಗಳನ್ನು ಪಡೆದುಕೊಳ್ಳಲಿದೆ.

";