ವಿಜಯಪುರ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಪ್ರಕರಣ ಸಂಬಂಧ ಸುಲೇಮಾನ್ ಎಂಬಾತನನ್ನು ಎನ್ಐಎ ಪೊಲೀಸರು ವಶಕ್ಕೆ ಪಡೆದ ವಿಚಾರವಾಗಿ ವಿಜಯಪುರ ನಗರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರತಿಕ್ರಿಯೆ ನೀಡಿದರು.
ಇಂಥ ಘಟನೆಗಳಲ್ಲಿ ಸುಲೇಮಾನ್ ಎಂಬ ಹೆಸರಿನ ವ್ಯಕ್ತಿ ಸಿಗಬೇಕೇ ವಿನಹ ಶಿವಪ್ಪ ಎಂಬವರು ಸಿಗಲ್ಲ. ಸುಲೇಮಾನ್, ಅಜಗರ್, ಅಹ್ಮದ್ ಇವರೇ ಸಿಗಬೇಕಲ್ಲಾ ಎಂದು ವಾಗ್ದಾಳಿ ನಡೆಸಿದ್ದು, ಬಾಂಬ್ ಸ್ಫೋಟ ಪ್ರಕರಣದ ತನಿಖೆ ಇನ್ನೂ ಆಳವಾಗಿ ನಡೆಯಬೇಕು.
ಬಾಂಬ್ ಬ್ಲಾಸ್ಟ್ ಸಾಮಾನ್ಯ ಪ್ರಕರಣವಲ್ಲ. ಈ ಘಟನೆಯ ಗಂಭೀರತೆಯನ್ನು ವಿಧಾನಸಭೆಯಲ್ಲಿ ಹೇಳಿದರೂ ಸರ್ಕಾರ ಒಪ್ಪಲಿಲ್ಲ. ಈ ಘಟನೆ ಕುರಿತು ಕಾಂಗ್ರೆಸ್ಸಿನ ಕೆಲ ಸಚಿವರು ಅಪ್ರಬುದ್ಧ ಹೇಳಿಕೆ ಕೊಟ್ಟಿದ್ದಾರೆ. ಇಂದು ಅವರಿಗೆ ಮುಖವಿಲ್ಲ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಗೃಹ ಮಂತ್ರಿಗಳೇ ಛೀಮಾರಿ ಹಾಕಿದ್ದು, ಏನು ಗೊತ್ತಿಲ್ಲದೆ ಮಾಧ್ಯಮಗಳ ಮುಂದೆ ಖರ್ಗೆ ಹೇಳಿಕೆ ಕೊಡುತ್ತಾರೆ. ಖರ್ಗೆ ಅವರು ಇಂಥ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಟ್ಟು ಇಲಾಖೆಯಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಲಿ. ಗ್ರಾಮೀಣ ಅಭಿವೃದ್ಧಿ ಇಲಾಖೆ ದೊಡ್ಡ ಇಲಾಖೆ. ಅಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಬರೀ ಹಿಂದೂಗಳನ್ನ ಬೈಯುವ ಕೆಲಸ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.