ಬಾಗಲಕೋಟೆ
ಬಾಗಲಕೋಟೆ ಜಿಲ್ಲಾ ವ್ಯಾಜ್ಯಗಳ ಪರಿಹಾರ ಆಯೋಗದ ನೂತನ ಅಧ್ಯಕ್ಷರಾಗಿ ಡಿ.ವೈ.ಬಸಾಪೂರ ಆಗಸ್ಟ ೫ ರಂದು ಅಧಿಕಾರಿ ವಹಿಸಿಕೊಂಡಿದ್ದಾರೆ.
ಡಿ.ವೈ.ಬಸಾಪುರ ಇವರು ಶಿರಹಟ್ಟಿ ತಾಲೂಕು ಚವಢಾಳ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದವರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಪ್ರೌಢ ಶಿಕ್ಷಣವನ್ನು ಶ್ರೀ ಶಿವಯೋಗಿಶ್ವರ ಪ್ರೌಢ ಶಾಲೆಯಲ್ಲಿ ಮುಗಿಸಿದರು. ಧಾರವಾಡದ ಕಲಾ ಕಾಲೇಜಿನಲ್ಲಿ ಬಿ.ಕಾಂ ಹಾಗೂ ಕೆ.ಪಿ.ಇ.ಎಸ್ ಕಾನೂನ ಕಾಲೇಜಿನಲ್ಲಿ ಎಲ್.ಎಲ್.ಬಿ (ಸ್ಪೇಷಲ್) ಪದವಿ ಪಡೆದರು. ಲಕ್ಷೆö್ಮÃಶ್ವರ ವಕೀಲರ ಸಂಘದ ಸದಸ್ಯರಾಗಿ ವಕೀಲ ವೃತ್ತಿಯನ್ನು ೧೯೮೬ ರಲ್ಲಿ ಪ್ರಾರಂಭಿಸಿದರು. ವಕೀಲರ ಸಂಘದ ಕಾರ್ಯದರ್ಶಿ, ಅಧ್ಯಕ್ಷರಾಗಿ ಹಾಗೂ ಶಿರಹಟ್ಟಿ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
೧೯೯೪ ರಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿ ನೇಮಕಗೊಂಡು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಸೇವೆ ಸಲ್ಲಿಸಿದರು. ೧೯೯೫ ರಲ್ಲಿ ಮುನ್ಸೀಫ್ ಜೆ.ಎಂ.ಎಫ್.ಸಿ ಯಾಗಿ ನೇಮಕಗೊಂಡು ನಾಗಮಂಗಲ, ಹಿರಿಯೂರು ಮತ್ತು ಸಿಂಧಗಿಯಲ್ಲಿ ಸೇವೆ ಸಲ್ಲಿಸಿದರು. ೨೦೦೪ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಮುಂಬಡ್ತಿ ಹೊಂದಿ, ಸಾಗರ ಹಾಗೂ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ೨೦೦೯ ರಲ್ಲಿ ತ್ವರಿತ ನ್ಯಾಯಾಲಯದ ಪೀಠಾಧಿಕಾರಿಯಾಗಿ ಮುಂಬಡ್ತಿ ಹೊಂದಿ, ಬೆಂಗಳೂರು ಹಾಗೂ ಚಿಕ್ಕೊಡಿಯಲ್ಲಿ ಸೇವೆ ಸಲ್ಲಿಸಿದರು.
೨೦೧೩ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಚಿಕ್ಕೊಡಿ, ಬೆಂಗಳೂರಿನಲ್ಲಿ ಎನ್.ಡಿ.ಪಿ.ಎಸ್ ಸ್ಪೇಷಲ್ ಕೋರ್ಟ (ಡ್ರಗ್ಸ) ಮತ್ತು ಹಾಸನದಲ್ಲಿ ಸೇವೆ ಸಲ್ಲಿಸಿದರು. ದಾವಣಗೆರೆ ಜಿಲ್ಲೆಯ ಪ್ರಧಾನ ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ, ೨೦೨೦ರ ಜನೇವರಿಯಲ್ಲಿ ನಿವೃತ್ತಿ ಹೊಂದಿರುತ್ತಾರೆ. ೧೦ ಮಾರ್ಚ ೨೦೨೨ ರಂದು ಗದಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು, ೦೫ ಆಗಷ್ಟ ೨೦೨೩ರ ವರೆಗೆ ಸೇವೆ ಸಲ್ಲಿಸಿದ್ದಾರೆ.
ಕನ್ನಡದಲ್ಲಿ ಅತ್ಯುತ್ತಮ ತೀರ್ಪು ನೀಡಿದ್ದಕ್ಕಾಗಿ, ಕನ್ನಡ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಇವರು ಸನ್ಮಾನ ಮಾಡಿ ಪಾರಿತೋಷಕವನ್ನು ನೀಡಿ ಗೌರವಿಸಿರುತ್ತಾರೆ. ವಿವಿಧ ಲೇಖನಗಳನ್ನೊಳಗೊಂಡ ಶಪಥ ಎಂಬ ಕನ್ನಡ ಕೃತಿಯನ್ನು ಪ್ರಕಟಿಸಿದ್ದಾರೆ. ೦೭ ಆಗಷ್ಟ ೨೦೨೩ ರಂದು ಬಾಗಲಕೋಟೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.