ಕಲಬುರಗಿ: ಕ್ರಿಮಿನಲ್ ಹಿನ್ನೆಲೆ ಇರುವವರು ಹೇಗೆ ಬಸವ ತತ್ವಪಾಲಕರಾಗುತ್ತಾರೆ? ಹಿಂದೂ ಧರ್ಮ ಹಾಗೂ ಬಸವ ತತ್ವಗಳು ತಲಾತಲಾಂತರದಿಂದ ಸಮಾಜಕ್ಕೆ ದಾರಿದೀಪವಾಗಿವಾಗಿವೆ ಹಾಗೂ ಇನ್ನೂ ಹಾಗೆಯೇ ಮುಂದುವರೆಯುತ್ತಿದ್ದು, ಬಸವ ತತ್ವಕ್ಕೆ ಹಾಗೂ ಹಿಂದೂ ಧರ್ಮಕ್ಕೆ ಬಿಜೆಪಿ ಹಾಗೂ ಶ್ರೀರಾಮ ಸೇನೆಯಂತ ಕ್ರಿಮಿನಲ್ ಸಂಘಟನೆಯ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಭಾಷಣ ಮಾಡುವ ಮೂಲಕ ಜನರಲ್ಲಿ ಕೋಮು ಭಾವನೆ ಕೆರಳಿಸಿರುವುದು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ 40 ಕೇಸುಗಳನ್ನು ಹಾಕಿಸಿಕೊಂಡಿರುವ ವ್ಯಕ್ತಿಗೆ ಕಲಬುರಗಿ ಜಿಲ್ಲೆಯ ಜನಪ್ರತಿನಿಧಿಯಾಗಿರುವ ನೀವು ಶ್ರೀರಾಮಸೇನೆಯ ಸಂಘಟನೆಯ ವಕ್ತಾರನಂತೆ ವರ್ತಿಸುತ್ತಿರುವುದು ಜಿಲ್ಲೆಯ ಮತದಾರರಿಗೆ ಮಾಡಿದ ಅವಮಾನವಾಗಿದೆ ಎಂದರು.
ನಿಮ್ಮ ಸ್ವಯಂ ಘೋಷಿತ ಸ್ವಾಮೀಜಿಯ ಮೇಲೆ ಈ ಹಿಂದೆ ಅಧಿಕಾರದಲ್ಲಿ ಇದ್ದ ಸರ್ಕಾರಗಳು ಕೇಸು ದಾಖಲಿಸಿವೆ. ಅವರು ಕಾನೂನಿಗೆ ಗೌರವ ಕೊಡುವಂತ ವ್ಯಕ್ತಿಯಾಗಿದ್ದರೆ ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ಕೇಸ್‌ಗಳನ್ನು ವಾಪಸ್ ತೆಗೆದುಕೊಳ್ಳಲಿಲ್ಲ? ಎಂದು ತಿರುಗೇಟು ನೀಡಿದರು.
ಬಸವ ತತ್ವದ ಎಳ್ಳಷ್ಟೂ ಲವಲೇಶವೂ ಗೊತ್ತಿರದ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯನ್ನು ನೀವು ಮಹಾನ್ ವ್ಯಕ್ತಿಯಂತೆ ಬಿಂಬಿಸ ಹೊರಟಿರುವುದು ನಿಜಕ್ಕೂ ನೀವು ಬಸವಣ್ಣನವರಿಗೆ ಮಾಡುತ್ತಿರುವ ಅವಮಾನವಷ್ಟೇ. ಅಲ್ಲದೇ ಬಸವ ತತ್ವಕ್ಕೆ ಎಸಗುತ್ತಿರುವ ಅಪಚಾರವಾಗಿದೆ. ಇದನ್ನು ಯಾವ ಬಸವಾಭಿಮಾನಿಯು ಒಪ್ಪಲಾರರು ಎಂದರು.