ವಾಹನ ತಪಾಸಣೆ ನೆಪದಲ್ಲಿ ರೈತರಿಗೆ ಕಿರುಕುಳ ಕೊಟ್ಟರೆ ಕಠಿಣ ಕ್ರಮ | ಯಾರೇ ದೂರು ನೀಡಿದರೂ ದಾಖಲಿಸಿಕೊಳ್ಳಿ
ಜನರ ಜೊತೆ ಸ್ನೇಹಿಯಾಗಿ, ಗೌರವದಿಂದ ನಡೆದುಕೊಳ್ಳಿ : ಎಸ್ಪಿ ಜಯಪ್ರಕಾಶ
ನಿಮ್ಮ ಸುದ್ದಿ ಬಾಗಲಕೋಟೆ
ಪೊಲೀಸರು ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ಇರಬೇಕು. ನ್ಯಾಯ ಕೇಳಿಕೊಂಡು ಠಾಣೆಗೆ ಬರುವ ಜನರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಅನುಚಿತವಾಗಿ ನಡೆದುಕೊಂಡರೆ ಅಂತ ಸಿಬ್ಬಂದಿ ವಿರುದ್ದ ಮೀನಾಮೇಷ ಎಣಿಸದೇ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಪೊಲೀಸ್ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಪ್ರಕಟನೆ ನೀಡಿರುವ ಅವರು ಪೊಲೀಸ್ ಠಾಣೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು. ಪೊಲೀಸರು ಎನ್ನುವ ಅಹಂನಲ್ಲಿ ಯಾರು ನಡೆದುಕೊಳ್ಳಬಾರದು. ನೊಂದ ಜನರು ಠಾಣೆಗೆ ಬಂದಾಗ ಅವರನ್ನು ಕೂಡ್ರಿಸಿಕೊಂಡು ಅವರ ಸಮಸ್ಯೆಯನ್ನು ಶಾಂತವಾಗಿ ಆಲಿಸಬೇಕು. ದೂರು ಕೊಡಲು ಬಂದ ಜನರಿಗೆ ನಿಮ್ಮ ಮೇಲೆ ವಿಶ್ವಾಸ ಮೂಡಬೇಕು. ಆ ರೀತಿಯಲ್ಲಿ ವರ್ತನೆ ಇರಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಕೆಲ ಪೊಲೀಸರು ದರ್ಪ ತೋರುತ್ತಾರೆ. ಗೌರಯುತವಾಗಿ ನಡೆದುಕೊಳ್ಳಲ್ಲ. ವಾಹನ ತಪಾಸಣೆ ನೆಪದಲ್ಲಿ ಅನಗತ್ಯ ಕಿರುಕುಳ ಕೊಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಇದೀಗ ಜಿಲ್ಲೆಯ ಎಲ್ಲ ಠಾಣೆಯ ಮುಖ್ಯಸ್ಥರು ಹಾಗೂ ಪೊಲೀಸ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪೊಲೀಸರು ತಮಗೆ ಕರ್ತವ್ಯಕ್ಕೆ ನಿಗದಿ ಪಡಿಸಿದ ಸ್ಥಳವನ್ನು ಬಿಟ್ಟು ಬಾರ್, ದಾಬಾಗಳಲ್ಲಿ ಸಮವಸ್ತ್ರದ ಮೇಲೆ ಕಾಣಿಸಿಕೊಳ್ಳುವಂತಿಲ್ಲ. ಸಂಚಾರಿ ಪೊಲೀಸರು ವಾಹನ ತಪಾಸಣೆ ನೆಪದಲ್ಲಿ ರೈತರು, ಬೈಕ್ ಸವಾರರು, ವೃದ್ದರು, ಮಹಿಳೆಯರಿಗೆ ತೊಂದರೆ ಕೊಡಬಾರದು. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು.
ಶಾಂತಿ, ಕಾನೂನು, ಸುವ್ಯವಸ್ಥೆ ರಕ್ಷಿಸಲು ಕಾನೂನು ರೀತಿಯ ಕರ್ತವ್ಯವನ್ನು ನಿರ್ವಹಿಸಬೇಕು. ಆದರೆ, ನಾವು ಪೊಲೀಸರು ಎನ್ನುವ ದರ್ಪವನ್ನು ಯಾವುದೇ ಕಾರಣಕ್ಕೂ ಮೆರೆಯುವಂತಿಲ್ಲ. ಫುಟ್ ಪಾತ್ ವ್ಯಾಪಾರಸ್ಥರು, ವಿವಿಧ ಕೆಲಸ ಕಾರ್ಯಗಳಿಗಾಗಿ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಬರುವ ರೈತರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಕಂಡು ಬಂದಲ್ಲಿ ಅಂತ ಸಿಬ್ಬಂದಿ ವಿರುದ್ದ ಕಠಿಣ ಕ್ರಮ ಅನಿವಾರ್ಯವಾಗುತ್ತದೆ. ಪೊಲೀಸರೆಂದರೆ ಸಾರ್ವಜನಿಕರು ಬೆಚ್ಚಿಬೀಳುವಂತೆ ಆಗಬಾರದು. ಠಾಣೆಗೆ ಬಂದು ದೂರು ಕೊಡಲು ಹಿಂದೇಟು ಹಾಕುವಂತಾಗಬಾರದು. ನೊಂದ ಜನರು ತಮ್ಮ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳಲು ಹಾಗೂ ನಮಗೆ ಇಲ್ಲಿ ನ್ಯಾಯ ಸಿಕ್ಕೆ ಸಿಗುತ್ತದೆ ಎನ್ನುವ ವಿಶ್ವಾಸ ವೃದ್ದಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಠಾಣೆಗಳ ಮುಖ್ಯಸ್ಥರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಾನೂನಿಗೆ ವಿರುದ್ದವಾದ ಚಟುವಟಿಕೆಯಲ್ಲಿ ತೊಡಗಿದವರು, ಜನರಿಗೆ ತೊಂದರೆ ಕೊಡುವವರು ಇಂತವರ ಜೊತೆ ಪೊಲೀಸರು ಸಂಪರ್ಕ ಬೆಳೆಸಿಕೊಳ್ಳಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ವರ್ತಿಸಬೇಕು. ಇದಕ್ಕೆ ವಿರುದ್ದವಾಗಿ ಯಾರೇ ನಡೆದುಕೊಂಡರೂ ಅಂತ ಸಿಬ್ಬಂದಿ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಜಯಪ್ರಕಾಶ್ ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದಾರೆ.