ಬಾಗಲಕೋಟೆ
ತರಬೇತಿಯಲ್ಲಿ ಆಸಕ್ತಿ ಹಾಗೂ ಶ್ರದ್ಧೆಯಿಂದ ಪಾಲ್ಗೊಂಡಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ಬರ್ಡ್ಸ್ ಸಂಸ್ಥೆ ಉಪಾಧ್ಯಕ್ಷ ರಂಗನಗೌಡ ದಂಡಣ್ಣವರ ಹೇಳಿದರು.
ನಬಾರ್ಡ ಹಾಗೂ ಬರ್ಡ್ಸ್ ಸಂಸ್ಥೆ ಸಹಯೋಗದಲ್ಲಿ ನಗರದ ಭಗಿನಿ ಸಮಾಜ ಕಟ್ಟಡದಲ್ಲಿನ ಬರ್ಡ್ಸ್ ಪ್ರೊಜೆಕ್ಟ್ ಸೆಂಟರ್‌ನಲ್ಲಿ ಹಮ್ಮಿಕೊಂಡ ಎರಡು ದಿನಗಳ ಜೇನು ಸಾಕಾಣಿಕೆ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಜೇನು ಸಾಕಾಣಿಕೆಯು ಕಡಿಮೆ ಕೆಲಸ ಹೆಚ್ಚು ಲಾಭ ತರುವ ಸ್ವಯಂ ಉದ್ಯೋಗವಾಗಿದ್ದು ಶಿಬಿರಾರ್ಥಿಗಳು ಇದರ ಪ್ರಯೋಜನೆ ಪಡೆಯಬೇಕೆಂದರು.
ಶಿಬಿರ ಕುರಿತು ಮಾತನಾಡಿದ ತರಬೇತಿದಾರ ಹಾಗೂ ಬರ್ಡ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಅಗಸಿಮುಂದಿನ, ಈಗಾಗಲೇ ಅನೇಕ ಕಡೆ ಐದು ದಿನಗಳ ತರಬೇತಿ ನೀಡಿದ್ದು ಈಗ ಎರಡು ದಿನಗಳ ಪುನಶ್ಚೇತನ ಶಿಬಿರ, ನಂತರದ ಹಂತದಲ್ಲಿ ಜೇನು ಸಾಕಾಣಿಕೆ ಪ್ರಮುಖ ಸ್ಥಳಗಳಿಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದೆಂದು ತಿಳಿಸಿದರು.
ವಿಶ್ವ ಭಾರತಿ ಕಂಪನಿ ಅಧ್ಯಕ್ಷೆ ಶಾಂತಾ ಅಂಗಡಿ, ನಾವೆಲ್ಲರೂ ಜೇನು ಸಾಕಾಣಿಕೆ ಉದ್ಯೋಗ ಮಾಡಲು ಸಿದ್ಧರಾಗಿದ್ದೇವೆ ಎಂದರು. ವಿಶ್ವ ಭಾರತಿ ಕಂಪನಿ ಕಾರ್ಯದರ್ಶಿ ಗೀತಾ ಜೋಗಣ್ಣವರ, ಬಸವರಾಜ ಕೋಳೂರ ಸೇರಿದಂತೆ ನಾನಾ ಗ್ರಾಮಗಳ ೪೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಇದ್ದರು.