ಬೆಂಗಳೂರು
ತಮಿಳುನಾಡಿಗೆ ನೀರು ಹರಿಸುತ್ತಿರುವದನ್ನು ವಿರೋಧಿಸಿ ಹಲವು ಸಂಘಟನೆಗಳು ನಾಳೆ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್ ಸುದ್ದಿಗೋಷ್ಠಿ ನಡೆಸಿ ಬಂದ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕರ್ನಾಟಕ ಹೈಕೋರ್ಟ್ ಬಂದ್ ಮಾಡದಂದೆ ಈಗಾಗಲೇ ಆದೇಶ ನೀಡಿದೆ. ಬೆಂಗಳೂರಿನಲ್ಲಿ ನಾಳೆ ಬಂದ್ ಮಾಡಲು ಅವಕಾಶ ನೀಡುವುದಕ್ಕೆ ಆಗೋದಿಲ್ಲ, ಮೆರವಣಿಗೆಗೂ ಅವಕಾಶ ಇಲ್ಲ. ನಗರದಾದ್ಯಂತ ವ್ಯಾಪಕ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಬಂದ್ ಗೆ ಬೆಂಬಲ ನೀಡುವಂತೆ ಒತ್ತಾಯ ಮಾಡಿದವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತೆ’ ಎಂದು ಹೇಳಿದರು.
‘ಇಂದು ಮಧ್ಯರಾತ್ರಿಯಿಂದ ನಾಳೆ ಮಧ್ಯರಾತ್ರಿಯರೆಗೆ ನಿಷೇದಾಜ್ಞೆ ಹೊರಡಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆದರೆ ಪೊಲೀಸರಿಗೆ ಕರೆ ಮಾಡಬಹುದು. ತಮಿಳುನಾಡಿಗೆ ಸಂಚರಿಸುವ ಬಸ್ ಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುತ್ತದೆ. ನಗರದಲ್ಲಿ ಬಸ್‌ಗಳ ಸಂಚಾರ ಆಯಾ ಸಾರಿಗೆ ಸಂಸ್ಥೆಗಳಿಗೆ ಬಿಟ್ಟದ್ದು. ಆದರೆ, ರ‍್ಯಾಲಿ ಮಾಡುವಂತಿಲ್ಲ. ಪ್ರಿಡಂ ಪಾರ್ಕಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡೋಕೆ ಅವಕಾಶ ಕಲ್ಪಿಸಲಾಗಿದೆ. ಹಿಂದೆ ಆಗಿರೋ ಘಟನೆ ಮರುಕಳಿಸದಂತೆ ನಾಳೆ ಎಚ್ಚರಿಕೆ ವಹಿಸಲಾಗುತ್ತೆ. ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ’ ಎಂದು ದಯಾನಂದ್ ಮಾಹಿತಿ ನೀಡಿದರು.