ಬೆಂಗಳೂರು: ರೌಡಿಶೀಟರ್‌ಗಳ ಬಳಿಯೂ ಲೈಸನ್ಸ್ ಹೊಂದಿರುವ ಗನ್ ಇರುವುದು ಪತ್ತೆಯಾದ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ರೌಡಿಶೀಟರ್ ಬಳಿ ಲೈಸನ್ಸ್ ಇರುವುದು ಕಂಡುಬಂದಿದ್ದು, ಆರರಿಂದ ಎಂಟು ಜನರ ಬಳಿ ಇದೆ ಅನ್ನೋದು ಗೊತ್ತಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಕಾನೂನಾತ್ಮಕವಾಗಿ ಅದನ್ನ ಪರಿಶೀಲನೆ ಮಾಡಬೇಕು. ಯಾವ ಹಿನ್ನಲೆಯಲ್ಲಿ ಮತ್ತು ಯಾವ ಸನ್ನಿವೇಶದಲ್ಲಿ ನೀಡಲಾಗಿದೆ ಎಂಬುದನ್ನು ಗಮನಿಸಬೇಕು. ಲೈಸನ್ಸ್ ವಾಪಸ್ಸು ಪಡೆಯಲು ಅವಕಾಶ ಇದೆ. ಕಾನೂನಾತ್ಮಕವಾಗಿ ಅದನ್ನು ಮಾಡಬೇಕು ಎಂದರು.
ಚುನಾವಣೆ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗನ್ಗಳನ್ನು ಹಿಂದಿರುಗಿಸಲು ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಇದೇ ವೇಳೆ ರೌಡಿಶೀಟರ್‌ಗಳ ಬಳಿಯೂ ಗನ್ಗಳು ಇರುವುದು ಬೆಳಕಿಗೆ ಬಂದಿದೆ. ಅಶೋಕ್ ಅಡಿಗ ಸೇರಿದಂತೆ ಒಟ್ಟು 6 ರೌಡಿಶೀಟರ್‌ಗಳ ಬಳಿ ಗನ್ಗಳಿರುವುದು ತಿಳಿದುಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಕೋಪಗೊಂಡ ಪೊಲೀಸ್ ಆಯುಕ್ತ ಬಿ.ದಯಾನಂದ, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ರೌಡಿ ಚಟುವಟಿಕೆ ನಿಗ್ರಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಚಟುವಟಿಕೆ ಮೇಲೆ ಪರಿಣಾಮ ಆಗಬಾರದು. ಹಾಗಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ವಿಭಾಗ ಮಟ್ಟದಲ್ಲಿ ರೌಡಿ ಮನೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸೂಚಿಸಿದರು.