ಹಾವೇರಿ : ನಾವು ತ್ಯಾಗ ಮಾಡಿ ಬಂದವರು, ಮನೆಯಲ್ಲಿ ಕುಳಿತುಕೊಂಡಿದ್ದೇವೆ. ನನಗೆ ಟಿಕೆಟ್ ಕೊಡಬೇಕು. ನಮಗೆ ಹೆದರಿಸುವುದು ಬೆದರಿಸುವುದು ಗೊತ್ತಿಲ್ಲ. ಸೈಲೆಂಟ್ ಇದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯ ಅಂತ ಭಾವಿಸಬಾರದು ಎಂದು ಮಾಜಿ ಸಚಿವ ಬಿಸಿ ಪಾಟೀಲ್ ತಿಳಿಸಿದರು.
ಲೋಕಸಭಾ ಟಿಕೆಟ್ ವಿಚಾರವಾಗಿ ಹಾವೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದು, ನಾನು ಹಾವೇರಿ – ಗದಗ ಜಿಲ್ಲೆಗಳ ಉಸ್ತುವಾರಿ ಆಗಿ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಕೊಡಬೇಕು, ಬಿವೈ ವಿಜಯೇಂದ್ರ ಹಾಗೂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದೀನಿ. ನಾನು ಟಿಕೆಟ್ ಬೆನ್ನತ್ತಿಕೊಂಡು ಹೋಗುವವನಲ್ಲ. ನನಗೆ ಟಿಕೆಟ್ ಕೊಡಬೇಕು ಅಂತ ವಾದ ಮಾಡ್ತಾ ಇದ್ದೇನೆ ಎಂದರು.
ಬಿಎಸ್ ಯಡಿಯೂರಪ್ಪನವೇ ಕಾಂತೇಶ್ ಜೊತೆ ನಿಂತು ಗೆಲ್ಲಿಸಿಕೊಂಡು ಬರೋದಾಗಿ ಮಾತುಕೊಟ್ಟಿದ್ದಾರೆ ಎಂಬ ಕೆಎಸ್ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಎಸ್ ಯಡಿಯೂರಪ್ಪನವರೇ ಆ ಮಾತು ಹೇಳಬೇಕಲ್ವಾ? ಅವರು ಹೇಳಿದರೆ ಆ ಪ್ರಕಾರ ನಡೆದುಕೊಳ್ಳಬೇಕಾಗುತ್ತೆ. ನಮಗೆ ಯಾವ ರೀತಿನೂ ಯಡಿಯೂರಪ್ಪ ಹೇಳಿಲ್ಲ. ನಾನು ಸೋತಿದ್ದೀನಿ, ಅವಕಾಶ ಕೊಡಿ ಗೆಲ್ತೀನಿ ಅಂತ ಕೇಳಿದೀನಿ ಎಂದು ತಿಳಿಸಿದರು.
ಟಿಕೆಟ್ ಸಿಗಲಿಲ್ಲ ಎಂದರೆ ಕಾರ್ಯಕರ್ತರ ಜೊತೆ ಮಾತಾಡ್ತೀನಿ. ನನಗೆ ನಂದೇ ಹಾದಿ ಇದೆ, ನನಗೆ ಶಿವರಾಮ್ ಹೆಬ್ಬಾರ್, ಎಸ್‌ಟಿ ಸೋಮಶೇಖರ್ ಹಾದಿ ಬೇಕಾಗಿಲ್ಲ. ಕೃಷಿ ಸಚಿವನಾಗಿ ರೈತರ ಹಿತ ಕಾದಿದ್ದೇವೆ. ಕೆಎಸ್ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರ ಬಗ್ಗೆ ಮಾತಾಡೋಕೆ ಹೋಗಲ್ಲ. ಕೆಇ ಕಾಂತೇಶ್‌ಗೂ ನನಗೆ ಸಂಬಂಧ ಇಲ್ಲ ಎಂದು ವಿವರಿಸಿದರು.