ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Parliament Election) ರಾಜ್ಯದಲ್ಲಿ ಭಾರಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಮೈಸೂರು-ಕೊಡಗು (Mysore kodagu Constituency) ಕೂಡಾ ಮಹತ್ವವನ್ನು ಪಡೆದುಕೊಂಡಿದೆ. ಯಾಕೆಂದರೆ, ಇಲ್ಲಿ ಸಂಸದರಾಗಿರುವ ಪ್ರತಾಪ್ ಸಿಂಹ (MP Pratapsimha) ಅವರು ಸದಾ ಕಾಲ ಸದ್ದು ಮಾಡುತ್ತಿರುತ್ತಾರೆ. ಅಭಿವೃದ್ಧಿ ವಿಚಾರವಿರಲಿ, ಸಿಎಂ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಸಡ್ಡು ಹೊಡೆಯುವುದಿರಲಿ, ಹಿಂದುತ್ವದ ಹೋರಾಟವಿರಲಿ ಅವರು ಮುಂಚೂಣಿಯಲ್ಲಿರುತ್ತಾರೆ. ಇಂಥ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಸಿಗುತ್ತದೋ ಇಲ್ಲವೋ ಎನ್ನುವ ಸಂಶಯ ಮೈಸೂರಿನ ಬಗ್ಗೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಪ್ರತಾಪ್ ಸಿಂಹ ಅವರಿಗೆ ಮೈಸೂರು ಟಿಕೆಟ್ ಮಿಸ್ (Pratap simha May miss Ticket) ಆಗುವುದು ಬಹುತೇಕ ನಿಶ್ಚಿತ ಎಂಬ ಪ್ರಬಲ ವಾದ ಕೇಳಿಬರುತ್ತಿದ್ದು, ಬಿಜೆಪಿ ಮೈಸೂರಿನ ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ (Yaduveer Odeyar) ಅವರನ್ನು ಕಣಕ್ಕಿಳಿಸಲಿದೆ ಎಂಬ ಸುದ್ದಿ ಜೋರಾಗಿದೆ.
ಪ್ರತಾಪ್ ಸಿಂಹ ಅವರು ಉತ್ತಮ ಕೆಲಸಗಾರರೇ ಆದರೂ ಪಕ್ಷದಲ್ಲಿ ಉತ್ತಮ ಅಭಿಪ್ರಾಯ ಇಲ್ಲದೆ ಇರುವುದು ಮತ್ತು ಅವರ ಗೆಲುವಿನ ಬಗ್ಗೆ ಸಮೀಕ್ಷೆಯಲ್ಲಿ ಸಕಾರಾತ್ಮಕ ಅಂಶಗಳು ಕಂಡುಬಂದಿಲ್ಲ ಎಂಬ ಕಾರಣಕ್ಕಾಗಿ ಹೈಕಮಾಂಡ್ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಹಿಂದೆ ಮುಂದೆ ನೋಡುತ್ತಿದೆ ಎನ್ನಲಾಗಿದೆ.
ಪ್ರತಾಪ್ ಸಿಂಹ ಅವರು ಪಕ್ಷದ ನಾಯಕರ ಜತೆ ಉತ್ತಮ ಸಂಬಂಧವನ್ನು ಹೊಂದಿಲ್ಲ. ಮಾಜಿ ಶಾಸಕರಾದ ರಾಮದಾಸ್, ಎಲ್. ನಾಗೇಂದ್ರ, ಹಾಲಿ ಶಾಸಕ ಶ್ರೀವತ್ಸ ಸೇರಿದಂತೆ ಹಲವರು ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯವಾಗಿ ನಡೆಸಿದ ನಾಯಕರ ಸಮೀಕ್ಷೆ ಪ್ರತಾಪ್‌ಸಿಂಹ ಅವರ ವಿರುದ್ಧವಾಗಿದೆ ಎನ್ನಲಾಗಿದೆ. 2009, 2014, 2019ರಲ್ಲಿ ಗೆದ್ದಿದ್ದ ಪ್ರತಾಪ್ ಸಿಂಹ ಅವರಿಗೆ ಈಗ ಪಕ್ಷದೊಳಗೇ ವಿರೋಧ ಜೋರಾಗಿದೆ. ಹೀಗಾಗಿ ಹೈಕಮಾಂಡ್ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಗೊಂದಲದಲ್ಲಿದೆ.
ಮೈಸೂರು ಒಡೆಯರಿಗೆ ಸಿಗುತ್ತಾ ಟಿಕೆಟ್?
ಮೈಸೂರಿನಲ್ಲಿ ಪ್ರತಾಪ್‌ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದರೆ ಅದು ನೇರವಾಗಿ ಸಿಗುವುದು ಮೈಸೂರು ರಾಜ ಮನೆತನದ ಯದುವೀರ್ ಒಡೆಯರ್ ಅವರಿಗೆ ಎನ್ನಲಾಗಿದೆ. ಬಿಜೆಪಿ ಕಳೆದ ಹಲವು ಸಮಯದಿಂದ ಯದುವೀರ್ ಅವರ ಜತೆ ಸಂಪರ್ಕದಲ್ಲಿದೆ. ಒಂದು ವೇಳೆ ಅವರು ಒಪ್ಪುವುದೇ ಖಚಿತವಾದರೆ ಮೈಸೂರಿನಿಂದ ಅವರಿಗೆ ಟಿಕೆಟ್ ನೀಡುವುದು ಖಚಿತ ಎಂಬ ಅಭಿಪ್ರಾಯವಿದೆ. ಈ ಬಾರಿ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ನಡುವೆ, ಮೈಸೂರಿನಲ್ಲಿ ಅಭ್ಯರ್ಥಿ ಬದಲಾಗುತ್ತಾರಾ? ಮೈಸೂರು ಒಡೆಯರ್ ಅವರಿಗೆ ಟಿಕೆಟ್ ನೀಡಲಾಗುತ್ತಿದೆ, ಈ ಬಗ್ಗೆ ಅಂತಿಮ ಸುತ್ತಿನ ಮಾತುಕತೆಯೂ ನಡೆದಿದೆ ಎಂಬ ಸುದ್ದಿಗಳ ಏನಂತೀರಿ ಎಂಬ ಪ್ರಶ್ನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ. ʻನಾಲ್ಕು ಕೋಣೆಗಳ ಒಳಗೆ ನಡೆದ ಚರ್ಚೆಯ ಬಗ್ಗೆ ಮಾಹಿತಿ ನೀಡಲಾಗದುʼ ಎಂದಿದ್ದಾರೆ. ಈ ಮೂಲಕ ಅವರು ಈ ಬಾರಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಇಲ್ಲ, ಯದುವೀರ್ ಅವರೇ ಸ್ಪರ್ಧಿಸಲಿದ್ದಾರೆ ಎಂದು ಸೂಚ್ಯವಾಗಿ ಹೇಳಿದರೇ ಎಂಬ ಚರ್ಚೆ ನಡೆಯುತ್ತಿದೆ.