ಬಾಗಲಕೋಟೆ
ಎಲ್ಲರಿಗೂ ಒಳ ಮೀಸಲು ಸೌಲಭ್ಯ ಸಿಗಬೇಕು. ಯಾರನ್ನೂ ಮೀಸಲು ಸೌಲಭ್ಯದಿಂದ ಕೈ ಬಿಡಬಾರದು ಎನ್ನುವುದು ಸಂಘ ಮತ್ತು ಬಿಜೆಪಿ ನಿಲುವಾಗಿತ್ತು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿಂದು ನಡೆದ ಮಾದಿಗ ಮುನ್ನಡೆ ಮಾದಿಗರ ಆತ್ಮಗೌರವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಆಗಲಿ, ಸಂಘ ಪರಿವಾರವಾಗಲಿ ಎಂದೂ ಮತ ಬ್ಯಾಂಕ್ ರಾಜಕಾರಣ ಮಾಡಿಲ್ಲ. ಸಾಮಾಜಿಕ ನ್ಯಾಯ ಕಲ್ಪಿಸುವ ಮೂಲಕ ಶೋಷಿತರನ್ನು ಮೇಲೆತ್ತುವ ಕೆಲಸ ಮಾಡಿದರು. ವಿನಾಕಾರಣ ವಿಧಾನಸಭೆ ಚುನಾವಣೆ ವೇಳೆ
ಕೆಲ ಸಮುದಾಯಗಳಲ್ಲಿ ತಪ್ಪು ತಿಳಿವಳಿಕೆ ಮೂಡಿಸುವ ಕೆಲಸ ಕಾಂಗ್ರೆಸ್ಸಿಗರಿಂದ ನಡೆಯಿತು ಎಂದರು.
ಕಾಂಗ್ರೆಸ್ಸಿಗರ ಮತ ಬ್ಯಾಂಕ್ ತುಷ್ಠೀಕರಣದ ಪರಿಣಾಮ ಎಸ್ಸಿ ಮತ್ತು ಎಸ್ಟಿ ವರ್ಗಗಳಲ್ಲಿ ಜಾತಿಗಳ ಸಂಖ್ಯೆಯಲ್ಲಿ ಹೆಚ್ಷಳವಾದರೂ ಮೂಲ ಅಸ್ಪ್ರಶ್ಯರು ಅವರನ್ನೆಲ್ಲ ಒಪ್ಪಿಕೊಂಡು ಮುನ್ನಡೆದರು
12 ನೇ ಶತಮಾನದಲ್ಲಿ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ವಿಶ್ವಗುರು ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದರು. ಅದರ ಮುಂದುವರಿದ ಭಾಗವಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರು ಸ್ವಾತಂತ್ರೋತ್ತರ ಭಾರತವನ್ನು ಶೋಷಣೆ ಮುಕ್ತವಾಗಿಸಲು ಸಂವಿಧಾನ ಬದ್ಧವಾದ ಮೀಸಲು ನೀತಿ ಜಾರಿಗೊಳಿಸಿದರು.
ಮೊದಲು ಮೀಸಲು ವ್ಯವಸ್ಥೆಯಲ್ಲಿ ಪರಿಶಿಷ್ಟ ಜಾತಿಯಲ್ಲಿ ಆರು ಸಮುದಾಯ, ಪರಿಶಿಷ್ಟ ಪಂಗಡದಲ್ಲಿ ಆರು ಸಮುದಾಯಗಳಿದ್ದವು. ಕಾಂಗ್ರೆಸ್ಸಿಗರ ಮತಬ್ಯಾಂಕ್ ರಾಜಕಾರಣದ ಪರಿಣಾಮ ಎಸ್ಸಿ ಎಸ್ಟಿ ವರ್ಗದಲ್ಲಿ ಇತರ ಅನೇಕ ಸಮುದಾಯಗಳು ಸೇರಿದವು. ಅವುಗಳನ್ನೆಲ್ಲ ಮೂಲ ಅಸ್ಪ್ರಶ್ಯರು ಒಪ್ಪಿಕೊಂಡರಾದರೂ ಬಲಿಷ್ಠ ಜಾತಿಗಳ ಸೇರ್ಪಡೆಯಿಂದ ಅವರೊಂದಿಗೆ ಪೈಪೋಟಿ ನಡೆಸಲು ಮೂಲ ಅಸ್ಪ್ರಶ್ಯರಿಗೆ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಒಳ ಮೀಸಲು ನಿಗದಿ ಹೋರಾಟ ಆರಂಭಗೊಂಡಿತು ಎನ್ನುವುದನ್ನು ಕಾರಜೋಳ ಬಿಚ್ಚಿಟ್ಟರು.
ಒಳ ಮೀಸಲಾತಿ ಹೋರಾಟದಿಂದ ಎಸ್.ಎಂ. ಕೃಷ್ಣ ಅವರು ಸದಾಶಿವ ಆಯೋಗ ರಚನೆ ಮಾಡಿದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಆಯೋಗಕ್ಕೆ 11 ಕೋಟಿ ರೂ. ಅನುದಾನ ನೀಡಲಾಯಿತು.ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿ ಸದಾಶಿವ ವರದಿ ಸರ್ಕಾರದ ಕೈ ಸೇರಿತು. ಬಳಿಕ ಬಂದ ಕಾಂಗ್ರೆಸ್ಸಿಗರು ಏನೂ ಮಾಡಲಿಲ್ಲ. ವರದಿ ಜಾರಿ ಮಾಡುತ್ತೇವೆ ಎಂದು ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಿದರು. ಆದರೆ ವರದಿ ಜಾರಿ ಮಾಡಲಿಲ್ಲ ಎಂದು ದೂರಿದರು.
ಕಳೆದ. 70 ವರ್ಷಗಳಿಂದ ಕಾಂಗ್ರೆಸ್ ಪರಿಶಿಷ್ಟರಿಗೆ ಮೋಸ ಮಾಡುತ್ತ ಬಂದಿದೆ. ಎಸ್ಸಿ ವರ್ಗದ ಸಮುದಾಯಗಳಲ್ಲಿ ಒಡಕು ಮೂಡಿಸಿ, ತಪ್ಪು ತಿಳಿವಳಿಕೆ ಮೂಡಿಸಿದ ಪರಿಣಾಮ ಚುನಾವಣೆ ವೇಳೆ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಯಿತು ಎಂದರು.
ಒಳ ಮೀಸಲು ಜಾರಿಯಿಂದ ಯಾರಿಗೂ ಅನ್ಯಾಯ ಆಗದು, ಎಲ್ಲರಿಗೂ ನ್ಯಾಯ ಸಿಗಲಿದೆ. ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.
ಮುಖಂಡ ಮುತ್ತಣ್ಣ ಬೆಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾದಾರ ಚನ್ನಯ್ಯ ಪೀಠದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಇತರರು ಇದ್ದರು.