ಧಾರವಾಡ: “ಬಿಜೆಪಿ ಕುಬೇರರ ಪಕ್ಷ, ನಮ್ಮದು ಬಡವರ ಪಾರ್ಟಿ ಆಗಿದ್ದು ಇಲ್ಲಿ ಯಾರು ಟಿಕೆಟ್ ಗೆ ದುಡ್ಡು ಕೊಡಬೇಕಿಲ್ಲ” ಇದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮಂಡ್ಯದ ಡಾ ಎಚ್ ಎನ್ ರವೀಂದ್ರ ಅವರು ರಾಜೀನಾಮೆ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಿಸಿ ವಿಪಕ್ಷ ನಾಯಕ ಆರ್ ಅಶೋಕ ಅವರ ಟೀಕೆಗೆ ಧಾರವಾಡ ಜಿಲ್ಲಾ ಉಸ್ತುವಾರಿಯೂ ಆಗಿರುವ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ನೀಡಿರುವ ತಿರುಗೇಟು.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮಂಡ್ಯಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕಾಂಗ್ರೆಸ್ ಪಕ್ಷದಿಂದ ಉದ್ಯಮಿ ಸ್ಟಾರ್ ಚಂದ್ರು ಅವರಿಗೆ ಟಿಕೆಟ್ ನೀಡಲು ಪಕ್ಷ ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಎಚ್ ಎನ್ ರವೀಂದ್ರ ಸೇರಿದಂತೆ ಹಲವು ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದರು.
ಇದಕ್ಕೆ ವಿಪಕ್ಷ ನಾಯಕ ಆರ್ ಅಶೋಕ ಅವರು ಕಾಂಗ್ರೆಸ್ ಪಕ್ಷ ಹಣಕ್ಕಾಗಿ ದೊಡ್ಡ ಕುಳಗಳಿಗೆ ಲೋಕಸಭೆ ಟಿಕೆಟ್ ನೀಡಿದ್ದು ಕಾರ್ಯಕರ್ತರಿಗೆ ಪಂಗನಾಮ ಹಾಕಿದೆ ಎಂದು ಲೇವಡಿ ಮಾಡಿದ್ದು, ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಯೇ ಅಲ್ಲಿನ ಭ್ರಷ್ಟಾಚಾರಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎಂಬುದು ಅಲ್ಲಿನ ಭ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೊನ್ನೆ ಸುತ್ತುವುದು ಮಾತ್ರ ಗ್ಯಾರಂಟಿ ಎಂದು ಅಭಿಪ್ರಾಯಪಟ್ಟಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.