ಬೆಂಗಳೂರು : ಕ್ರಿಮಿನಲ್ ಗಳಿಗೆ ಜಾತಿ, ಧರ್ಮವಿಲ್ಲ, ಕಾನೂನು ಕೈಗೆ ತೆಗೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಬೆಂಗಳೂರಿನಲ್ಲಿ ಮೊಬೈಲ್ ಅಂಗಡಿ ಮಾಲೀಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಆರೋಪದ ಹಿನ್ನೆಲೆಯಲ್ಲಿ ಈ ರೀತಿಯಲ್ಲಿ ತಿರುಗೇಟು ನೀಡಿದ್ದು,ಬೆಂಗಳೂರಿನ ಕಬ್ಬನ್ ಪೇಟೆ ಸಿದ್ದನಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದೇ ವಿಚಾರವಾಗಿ ಟ್ವೀಟ್ ಮಾಡಿದ್ದ ಬಿಜೆಪಿ ಇದು ಮಾತಾಂಧರ ಕೃತ್ಯ ಎಂದು ಆರೋಪಿಸಿತ್ತು. ಅಲ್ಲದೆ ಕರ್ನಾಟಕದಲ್ಲಿ ತಾಲೀಬಾನ್ ಕೃತ್ಯ ನಡೆಯುತ್ತಿದೆ ಎಂದು ಟ್ವೀಟ್ ಮಾಡಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರ್ ಖಂಡ್ರೆ , ತಾಲಿಬಾನ್ ಆಡಳಿತ ನಡೆಸುವ ಸರ್ಕಾರಕ್ಕೆ 300- 400 ಕೋಟಿ ಕೊಟ್ಟಿದ್ದು ಬಿಜೆಪಿ. ತಾಲಿಬಾನ್ ಅಪಘಾನಿಸ್ತಾನಕ್ಕೆ ಸಾವಿರಾರು ಕೋಟಿ ಕೊಟ್ಟು ಈಗ ಹೀಗೆ ಹೇಳ್ತೀರಾ? ನಿಜವಾದ ತಾಲಿಬಾನಿಗಳು ಇವರು. ಕ್ರಿಮಿನಲ್ ಗಳಿಗೆ ಜಾತಿ ಧರ್ಮ ಬರುವುದಿಲ್ಲ. ಕಾನೂನು ಕೈಗೆ ತೆಗೆದುಕೊಂಡವರಿಗೆ ಸೂಕ್ತ ಶಿಕ್ಷೆ ಆಗುತ್ತದೆ. ಸುಮ್ಮನೆ ಜನರನ್ನು ಪ್ರಚೋದನೆ ಮಾಡುವುದಕ್ಕೆ ಬಿಜೆಪಿ ಹೇಳಿಕೆಗಳನ್ನು ಕೊಡುತ್ತಿದೆ ಎಂದು ಅವರು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಕುರಿತಾಗಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ 25 ಸ್ಥಾನ ಗೆಲ್ಲುವ ನಿರೀಕ್ಷೆ ಇದ್ದು, ಕಾಂಗ್ರೆಸ್ ಗೆ ಒಳ್ಳೆಯ ವಾತಾವರಣ ಇದೆ. ಬೀದರ್ ನಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಸೋಲಿಸ್ತೀವಿ. ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸ್ತೇವೆ ಎಂದರು.ಬೀದರ್‌ಗೆ ಸಾಗರ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ. ರಾಜಶೇಖರ್ ಪಾಟೀಲ್ ಎಲೆಕ್ಷನ್ ಗೆ ನಿಲ್ಲಲ್ಲ ಅಂದಿದ್ರು. ಸಾಗರ್ ಕ್ಷೇತ್ರದಾದ್ಯಂತ ಓಡಾಡ್ತಿದ್ದಾನೆ. ಹೈಕಮಾಂಡ್ ಯಾರಿಗೇ ಟಿಕೆಟ್ ಕೊಟ್ರೂ ಗೆಲ್ಲಿಸಿಕೊಂಡು ಬರ್ತೇವೆ ಎಂದು ವಿವರಿಸಿದರು.