ಕಲಬುರಗಿ: ಬಿಜೆಪಿ ಪ್ರಣಾಳಿಕೆ ಮೋದಿ ಫೋಟೊ ಆಲ್ಬಂನಂತಿದೆ, ಅದರಲ್ಲಿ ಯಾವುದೆ ಸ್ಪಷ್ಟತೆ ಇಲ್ಲ, ಪ್ರಣಾಳಿಕೆ ಘೋಷಣೆಗಳ ಪುಸ್ತಕದಂತಿದ್ದು ಮೋದಿ ಅವರ ಪಿಕ್‌ನಿಕ್‌ನ ವಿಭಿನ್ನ ಫೋಟೋಗಳು ಬಿಟ್ಟರೆ ಯುವಕರಿಗೆ, ಮಹಿಳೆಯರಿಗೆ, ರೈತರಿಗೆ, ಬಡವರಿಗೆ, ಶ್ರಮಿಕರಿಗೆ, ನಿರ್ಗತಿಕರಿಗೆ ಉಪಯೋಗವಾಗುವಂತ ಯಾವುದೇ ಅಂಶಗಳಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.
ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆ ಈ ಹಿಂದಿನ ಅಚ್ಚೇದಿನ್‌ನಿಂದ ಹಿಡಿದು, ವಿಕಸಿತ ಭಾರತ, ಅಮೃತ ಕಾಲ್ ಮೂಲಕ ಸಾಗಿ ಈಗಿನ ಮೋದಿ ಕೀ ಗ್ಯಾರಂಟಿ ವರೆಗೆ ಬಂದಿದೆ. ಮೋದಿ ಗ್ಯಾರಂಟಿಗೆ ವಾರಂಟಿ ಇಲ್ಲ, ಕಾಂಗ್ರೆಸ್ ಗ್ಯಾರಂಟಿಗೆ, ಖರ್ಗೆ ಸಾಹೇಬರು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಾಹೇಬರೇ ವಾರಂಟಿ ಇದ್ದಾರೆಂದರು.
ಕೇಂದ್ರದ ಅಂಕಿ ಅಂಶಗಳ ಪ್ರಕಾರ, ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಕೇಂದ್ರದ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ 9.64 ಲಕ್ಷ ಹುದ್ದೆಗಳು ಹಣಕಾಸು ಇಲಾಖೆಯಲ್ಲಿ, 3 ಲಕ್ಷ ಹುದ್ದೆಗಳು ರೇಲ್ವೆ ಇಲಾಖೆಯಲ್ಲಿ, 2.2 ಲಕ್ಷ ಹುದ್ದೆಗಳು ಸೇನೆಯ ಸಿವಿಲ್ ವಿಭಾಗದಲ್ಲಿ, 1.20 ಲಕ್ಷ ಹುದ್ದೆಗಳು ಅಂಚೆ ಇಲಾಖೆಯಲಿ, 74,000 ಹುದ್ದೆಗಳು ಕಂದಾಯ ಇಲಾಖೆಯಲ್ಲಿ ಖಾಲಿ ಇವೆ. ಈ ಎಲ್ಲ ಹುದ್ದೆ ತುಂಬಲು ಯಾವ ಕ್ರಮ ಕೈಗೊಳ್ಳಲಾಗುವುದು ಎನ್ನುವ ಕುರಿತು ಬಿಜೆಪಿ ಪ್ರಣಾಳಿಕೆಯಲ್ಲಿ ಇಲ್ಲ. ಐಒಎಲ್ ವರದಿ ಪ್ರಕಾರ ಶೇ.83ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಲೋಕನೀತಿ ಸರ್ವೆ ಪ್ರಕಾರ, ಶೇ.79 ಯುವಕರಿಗೆ ಉದ್ಯೋಗ ಅವಕಾಶಗಳು ಸಿಗುತ್ತಿಲ್ಲ. ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲವೆಂದು ಟೀಕಿಸಿದರು.
ನೇಮಕಾತಿ ಪರೀಕ್ಷೆಗಳಲ್ಲಿನ ವಂಚನೆ ತಡೆಯಲು ತಾವೇ ಖಾಸಗಿ ಬಿಲ್ ಮಂಡಿಸಿದ್ದಾಗಿ ಹೇಳಿದ ಖರ್ಗೆ, ಅದೀಗ ಎರಡೂ ಸದನಗಳಲ್ಲಿ ಪಾಸಾಗಿ ರಾಜ್ಯಪಾಲರ ಅನುಮೋದನೆಗೆ ಕಳಿಸಲಾಗಿತ್ತು, ಬಿಲ್‌ವಾಪಸ್ ಬಂದಿದೆ. ಇದೀಗ ಯುವಕರ ಬಗ್ಗೆ ಮೋದಿಯ ಗ್ಯಾರಂಟಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಾಯಿದೆ ತರಲಾಗುವುದು ಎಂದಿದೆ. ಇದು ನಮ್ಮ ಬಿಲ್‌ನ ನಕಲು. ಅವರದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಪರೀಕ್ಷೆಗಳಲ್ಲಿ ಅವಾಂತರ ನಡೆದರೂ ಕ್ರಮ ಕೈಗೊಳ್ಳದವರು ಈಗ ಕ್ರಣಕ್ಕೆ ಮುಂದಾಗ್ತಾರಾ? ಎಂದು ಪ್ರಶ್ನಿಸಿದರು.
ಈ ಹಿಂದಿನ ಹತ್ತು ವರ್ಷಗಳ ಗ್ಯಾರಂಟಿಗಳು ಯಾರ ಗ್ಯಾರಂಟಿಗಳಾಗಿದ್ದವು? ಅವರದೇ ಗ್ಯಾರಂಟಿಗಳಾದ ಅಚ್ಛೇದಿನ್, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, 100 ಸ್ಮಾರ್ಟ್‌ಸಿಟಿಗಳು, 2 ಕೋಟಿ ಉದ್ಯೋಗ ಸೃಷ್ಟಿಯ ಗ್ಯಾರಂಟಿಗಳು ಏನಾದವು? ಯಾವ ಗ್ಯಾರಂಟಿಗಳು ಅನುಷ್ಠಾನಗೊಂಡಿವೆ? ಅವರ ಗ್ಯಾರಂಟಿಗಳಿಗೆ ವಾರೆಂಟಿಯೇ ಇಲ್ಲ. ಹಾಗಾಗಿ, ಜನರು ಅವರ ಗ್ಯಾರಂಟಿಗಳನ್ನು ನಂಬುವುದಿಲ್ಲ. ನಮ್ಮ ಸರ್ಕಾರದ ಗ್ಯಾರಂಟಿಗಳನ್ನೇ ಬಿಜೆಪಿ ನಕಲು ಮಾಡಿದೆ ಎಂದರು.