ಬಾಗಲಕೋಟೆ: ‘ ಬಿಜೆಪಿಯವರು ಪಾಕಿಸ್ತಾನದ ರಾಯಭಾರಿಗಳಂತೆ ಮಾತನಾಡುತ್ತಾರೆ’ ಎಂದು ಅಬಕಾರಿ ಖಾತೆ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಟೀಕಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಾಕಿಸ್ತಾನ ಘೋಷಣೆ ಬಗ್ಗೆ ಕಾಂಗ್ರೆಸ್ ಮುಖಂಡರ ಬಗ್ಗೆ ಟೀಕೆ ಕುರಿತ ಪ್ರಶ್ನೆಗೆ ಉತ್ತರಿಸಿದರು. ‘ ಸಂಸತ್ ಮೇಲೆ ದಾಳಿ ನಡೆದಾಗ ನಾವು ವಿಷಯವನ್ನು ರಾಜಕೀಯ ಕ್ಕಾಗಿ ಬಳಸಲಿಲ್ಲ, ಕಾರ್ಗಿಲ್ ಯುದ್ಧ ನಡೆದಾಗ ರಾಜಕಾರಣ ಮಾಡಲಿಲ್ಲ. ಬಿಜೆಪಿ ಯವರಿಗೆ ದೇಶ, ಧರ್ಮ ಬೇಕಾಗಿಲ್ಲ. ಅವರಿಗೆ ಅಧಿಕಾರ ಮಾತ್ರ ಬೇಕು. ಹೀಗಾಗಿ ದಿನಕ್ಕೆ ಮೂರು ಬಾರಿ ಪಾಕಿಸ್ತಾನ ಎಂದು ಹೇಳಿಕೆ ಕೊಡುತ್ತಾರೆ. ಪಾಕಿಸ್ತಾನವೇ ಇವರ ಮನೆ ದೇವರು, ಅಧಿಕಾರಕ್ಕಾಗಿ ಎಂತಹ ಅಡ್ಡ ದಾರಿಯನ್ನಾದರೂ ಹಿಡಿಯುತ್ತಾರೆ’ ಎಂದು ಆರೋಪಿಸಿದರು.
‘
ಪಾಕಿಸ್ತಾನ ಘೋಷಣೆ ಬಗ್ಗೆ ಎಫ್ ಎಸ್ ಎಲ್ ವರದಿ ಬರಲಿದೆ. ಸಿಂದಗಿ ಪಾಕ್ ಧ್ವಜ ಪ್ರಕರಣ, ಮಂಗಳೂರು ಘಟನೆಗಳನ್ನು ನೋಡಿದರೆ ಬಿಜೆಪಿ ಕೈವಾಡವಿದೆ ಎಂದು ಜನರಲ್ಲಿ ಭಾವನೆಯಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ನಡೆದಾಗ ಬಿಜೆಪಿ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟರಾ ?. ನಮ್ಮ ಮುಖ್ಯಮಂತ್ರಿ ಘಟನೆಗೆ ಕಾರಣವಾಗಿದ್ದಾರೆ ಎನ್ನುವ ಹಾಗೆ ಬಿಜೆಪಿ ಯವರು ಮಾತನಾಡುತ್ತಾರೆ’ ಎಂದರು.
ಸಿಎಂ ಸಿದ್ದರಾಮಯ್ಯ ಅವರ ಜೈ ಸೀತಾರಾಮ ಘೋಷಣೆ ಬಗ್ಗೆ ‘ ಮಂದಿರದಲ್ಲಿ ಪ್ರವೇಶ ನಿರಾಕರಿಸಿದರೂ ನಾನು ಹಿಂದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಹಿಂದು ಧರ್ಮ ಎಂದರೆ ಎಲ್ಲರ ಆಸ್ತಿ, ಹನುಮಂತ, ರಾಮ, ಸೀತೆ ಎಲ್ಲರನ್ನೂ ನಾವು ಪೂಜಿಸುತ್ತೇವೆ. ರಾಮ ಮಂದಿರ ಉದ್ಘಾಟನೆಗೆ ಆಹ್ವಾನಿಸದ ಕಾರಣ ಸಿಎಂ ಹೋಗಿಲ್ಲ. ಬಿಜೆಪಿಯವರು ಹೇಳಿದಂತೆ ನಾವು ನಡೆದುಕೊಳ್ಳಬೇಕಿಲ್ಲ. ಶ್ರೀರಾಮ ಬಿಜೆಪಿಯವರ ಆಸ್ತಿ ಅಲ್ಲ’ ಎಂದು ಉತ್ತರಿಸಿದರು.
‘
ರಾಜ್ಯದಲ್ಲಿ ಬರದ ಸ್ಥಿತಿಯಿದ್ದು, ರಾಜ್ಯ ಸರಕಾರದಿಂದ ಉಚಿತ ವಿದ್ಯುತ್, ಬಸ್ ಸಂಚಾರ ಸೌಲಭ್ಯ ವಿದೆ. ಆದರೆ ಕೇಂದ್ರ ಸರಕಾರದಿಂದ ಯಾವುದೇ ನೆರವು ದೊರೆತಿಲ್ಲ. ರಾಜ್ಯದ ಸಂಸದರು ಬರ ಸ್ಥಿತಿ ಅಧ್ಯಯನ ನಡೆಸಿಲ್ಲ. ಶ್ರೀರಾಮ ಜಯರಾಮ್, ಮೋದಿ ಇವುಗಳಷ್ಟೇ ಬಿಜೆಪಿಯವರ ಅಂಶಗಳು’ ಎಂದು ಟೀಕಿಸಿದರು.