ಬೆಂಗಳೂರು: ಕೇರಳದಲ್ಲಿ ಎಸ್ ಡಿ ಪಿ ಐ ಬೆಂಬಲವನ್ನು ನಾವು ಕೋರಿಲ್ಲ. ಬದಲಾಗಿ, ಅವರೇ ಕೊಟ್ಟರೆ ನಾವೇನು ಮಾಡಲು ಆಗಲ್ಲ ಎಂದು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದಿ ಪಕ್ಷವನ್ನು ಸೋಲಿಸಲು ಬೆಂಬಲ ಕೊಟ್ಟರೆ ಅದು ಅವರಿಗೆ ಬಿಟ್ಟಿದ್ದು. ನಾವು ಅವರಿಗೆ ಬೆಂಬಲ ಕೋರಿಲ್ಲ ಎಂದರು.
ಬಿಜೆಪಿ ಸದಸ್ಯರು ಗೋಡ್ಸೆ ಮಂದಿರ ಕಟ್ಟಬೇಕು, ಪೂಜೆ ಮಾಡಬೇಕು ಎಂದು ಹೇಳುತ್ತಿದ್ದು, ಮಹಾತ್ಮ ಗಾಂಧಿ ಪುತ್ಥಳಿ ಮಾಡಿ ಅದಕ್ಕೆ ಗುಂಡು ಹಾರಿಸುವವರ ಜೊತೆಗೆ ಬಿಜೆಪಿ ಇದೆ. ನಾವು ಬಹುತ್ವ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು. ಸಂವಿಧಾನ ರಕ್ಷಣೆ ಮಾಡುವವರು ಎಂದು ತಿರುಗೇಟು ನೀಡಿದರು.
ಲೋಕಸಭಾ ಚುನಾವಣೆಗಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಗೊತ್ತಾಗಿದೆ. ಈ ಮಾತು ನಿಜವಾಗಿದ್ದರೆ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಕರ್ನಾಟಕದ ಜನರು ಸುರಕ್ಷತೆಯಿಂದ ಇರಲು ಸಾಧ್ಯವೇ? ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ. ಚನ್ನಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದರು.
ಎಸ್ ಡಿ ಪಿ ಐ ಕೂಡಾ ಕೋಮುವಾದಿ ಪಕ್ಷ ಅಲ್ಲವೇ ಎಂಬ ಪ್ರಶ್ನೆಗೆ, ನಾವು ಅವರ ಬೆಂಬಲ ಕೋರಿಲ್ಲ. ಬಿಜೆಪಿ ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜೊತೆಗೆ ಸಮ್ಮಿಶ್ರ ಸರ್ಕಾರ ನಡೆಸಿತ್ತು. ಪಿಡಿಪಿ ಕಾಶ್ಮೀರದಲ್ಲಿ ಚುನಾವಣೆಯ ಬಳಿಕ ಪಾಕಿಸ್ತಾನಕ್ಕೆ ಧನ್ಯವಾದ ಹೇಳಿದ ಪಕ್ಷದ ಜೊತೆಗೆ ಮೈತ್ರಿ ಮಾಡಿದ್ದಾರೆ. ಅವರ ಜೊತೆಗೆ ಬಿಜೆಪಿ ಎರಡು ವರ್ಷ ಸರ್ಕಾರ ನಡೆಸಿತ್ತು ಎಂದರು.