ಬಾಗಲಕೋಟೆ
ವಚನ ಸಾಹಿತ್ಯ ಹಿಂದಿಗಿಂತಲೂ ಈಗ ಅನಿವಾರ್ಯದ ಪರಿಸ್ಥಿತಿ ಇದ್ದು ೧೨ನೇ ಶತಮಾನದ ವಚನ ಸಾಹಿತ್ಯದ ಏಳಿಗೆಯ ಕುರಿತು ಇಂದು ಎಲ್ಲರಿಗೂ ತಿಳಿಸಬೇಕಿದೆ ಎಂದು ಪಪೂ ಶಿಕ್ಷಣ ಇಲಾಖೆ ವಿಶ್ರಾಂತ ಉಪನಿರ್ದೇಶಕ ಮಲ್ಲಿಕಾರ್ಜುನ ಅಂಗಡಿ ಹೇಳಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಬಸವೇಶ್ವರ ಮಂಗಲ ಭವನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ , ಕದಳಿ ಮಹಿಳಾ ವೇದಿಕೆ, ಕರ್ನಾಟಕ ವಚನ ಸಾಹಿತ್ಯ ಪರಿರಿಷತ್ ತಾಲೂಕು ಘಟಕದ ಸಹಯೋಗದಲ್ಲಿ ಬಸವೇಶ್ವರ ಜಯಂತಿ ಹಾಗೂ ಕಾಯಕ ದಿನದ ನಿಮಿತ್ತ ನಡೆದ ೨೨ನೇ ಮನೆ ಮನೆಗಳಿಗೆ ವಚನ ಸೌರಭ ಹಾಗೂ ಮಾಸಿಕ ಶರಣ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
೧೨ನೇ ಶತಮಾನ ಕ್ರಾಂತಿಕಾರಕ ಶತಮಾನವಾಗಿದ್ದು ಸಮಾಜದಲ್ಲಿ ಮೌಢ್ಯ ತುಂಬಿದ ಕಾಲಘಟ್ಟದಲ್ಲಿ ಅಂದಿನ ಶರಣರು ಶೋಷಣೆ ವಿರುದ್ಧ ಪ್ರಜ್ಞೆ ಮೂಡಿಸುವ ಕೆಲಸ ಮಾಡಿದ್ದಾರೆ. ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದಿದ್ದಾರೆ ಎಂದರು.
ಜೀವನದಲ್ಲಿ ಶ್ರಮ ಪಡಬೇಕು, ಶರಣರು ಹೇಳಿದಂತೆ ಸ್ವಾಭಿಮಾನದ ಬದುಕು ನಿಮ್ಮದಾಗಬೇಕು. ತೆರಿಗೆ ರೂಪದಲ್ಲಿ ಸರಕಾರದ ಬಳಿಯಿರುವ ಹಣವನ್ನು ದುಡಿಯದೇ ಕೇಳುವುದೆಂದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಬೇರೆಯವರ ಶ್ರಮದಲ್ಲಿ ಬದುಕು ಸಾಗಿಸುವುದು ಬೇಡ. ಕಾಯಕ ಮಾಡುವ ಶ್ರಮಜೀವಿಯೇ ಶ್ರೇಷ್ಠ. ತಮ್ಮ ತಮ್ಮ ಕಾಯಕ ಮನೆ, ಮನಸ್ಸನ್ನು ಶುದ್ಧವಾಗಿಡುವ ಸಾಧನವಾಗಿದೆ ಎಂದು ಹೇಳಿದರು.
ಚಿತ್ತರಗಿ-ಇಳಕಲ್ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಶ್ರೀ, ಅಮೀನಗಡದ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಶ್ರೀ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪ್ರೊ.ಎಸ್.ಎನ್.ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಭು ಮಾಲಗಿತ್ತಿಮಠ, ಶಿವಾನಂದ ಶೆಟ್ಟರ್, ಸಂಗಮೇಶ ಹೊದ್ಲೂರ, ಸಿದ್ದಣ್ಣ ಯಂಡಿಗೇರಿ, ಬಸವರಾಜ ಕಂಠಿ, ಚನ್ನಪ್ಪ ರೇವಡಿ, ಅನ್ನಪ್ಪ ಕಂಬಳಿ, ಪಪಂ ಸದಸ್ಯ ವಿಜಯಕುಮಾರ ಕನ್ನೂರ ಇತರರು ಇದ್ದರು.
“ಲಿಂಗೈಕ್ಯ ಪ್ರಭುರಾಜೇಂದ್ರ ಶ್ರೀಗಳು ಪ್ರವಚನದ ಮೂಲಕವೇ ನಾಡಿನಾದ್ಯಂತ ಹೆಸರಾದವರು. ಬಸವ ಸಾಹಿತ್ಯವನ್ನು ತಲೆ ಮೇಲೆ ಹೊತ್ತು ವಿಶ್ವ ಪರ್ಯಟನ ಮಾಡಿದ್ದಾರೆ. ಅವರಂತೆ ಶಂಕರರಾಜೇಂದ್ರ ಸ್ವಾಮೀಜಿ ಆಧ್ಯಾತ್ಮ ಶಕ್ತಿಯಾಗಿ ಬೆಳೆದಿದ್ದಾರೆ. ವಚನ ಸಾಹಿತ್ಯ ಸಂಭ್ರಮದ ವರ್ದಂತಿ ಮಹೋತ್ಸವ ಅಮೀನಗಡದಲ್ಲೇ ನಡೆಯುವಂತಾಗಲಿ. “
-ಪ್ರಭು ಮಾಲಗಿತ್ತಿಮಠ, ಅಧ್ಯಕ್ಷರು, ತಾಲೂಕು ವಚನ ಸಾಹಿತ್ಯ ಪರಿಷತ್.