ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ಜಾತಿಗಣತಿ ಸಮೀಕ್ಷೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ವಿವಿಧ ಜಾತಿ, ರಾಜಕೀಯ ನಾಯಕರು, ಸ್ವಪಕ್ಷದ ಶಾಸಕರ ವಿರೋಧದ ನಡುವೆಯೂ ನಿನ್ನೆ ವರದಿ ಸ್ವೀಕರಿಸಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯನ್ನು ಬಹಿರಂಗಪಡಿಸಿಲ್ಲ ಎಂದು ಮಾಹಿತಿ ತಿಳಿದು ಬಂದಿದೆ.
ಆದರೆ, ವರದಿ ಸ್ವೀಕಾರ ಮಾಡುವ ಮೂಲಕ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಅಲ್ಲಾಡಿಸುತ್ತಿರುವ ಡಿಕೆ ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಎಎಸ್ ಪಾಟೀಲ್ ನಡಹಳ್ಳಿ ಹೇಳಿದ್ದು, ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿ ಸ್ವೀಕರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಕುರ್ಚಿಗೆ ಕೈಹಾಕಿದರೆ ಹುಷಾರ್ ಎಂಬ ಸಂದೇಶ ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಯಾರು ಸಿಎಂ ಕುರ್ಚಿ ಅಲ್ಲಾಡಿಸುತ್ತಿದ್ದಾರೋ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಅದನ್ನ ಬಿಟ್ಟು ಹಿಂದುಳಿದವರಿಗೆ ನ್ಯಾಯ ಕೊಡಬೇಕು ಎಂಬ ಯಾವುದೇ ಉದ್ದೇಶ ಇವರಲ್ಲಿ ಇಲ್ಲ. ಸಮಾಜಿಕವಾಗಿ ಎಲ್ಲರಿಗೂ ಮನ್ನಣೆ ನೀಡಬೇಕು ಎಂಬುದು ನಮ್ಮ ನಿಲುವಾಗಿದ್ದು, ಹಿಂದುಳಿದ ಆಯೋಗವನ್ನು ಗುರುತಿಸಿ ಸಾಂವಿಧಾನಿಕ ಮನ್ನಣೆ ಕೊಟ್ಟಿದ್ದೇ ನಾವು ಎಂದರು.