ಬಾಗಲಕೋಟೆ
ಐತಿಹಾಸಿ ತಾಣ ಐಹೊಳೆಯ ಸ್ಮಾರಕ ರಕ್ಷಿಸುವಲ್ಲಿ ಭಾಗಶ: 127 ಮನೆಗಳ ಗ್ರಾಮ ಸ್ಥಳಾಂತರವನ್ನು ರದ್ದುಪಡಿಸಿ ಸಂಪೂರ್ಣ ಸ್ಥಳಾಂತರಕ್ಕೆ ಮುಂದಾಗಬೇಕು ಎಂದು ಶಾಸಕ ಎಚ್.ವೈ.ಮೇಟಿ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ ಅವರು, ಐಹೊಳೆಯಲ್ಲಿ ಅಂದಾಜು 125 ಪುರಾತನ ಕಾಲದ ದೇವಾಲಯ, ಸ್ಮಾರಕ ಸೇರಿದಂತೆ ಹಲವು ಇತಿಹಾಸದ ಕುರುಹುಗಳಿದ್ದು ಅವುಗಳ ಸಂರಕ್ಷಣೆಯ ಹಿತದೃಷ್ಠಿಯಿಂದ ಪುರಾತತ್ವ ಇಲಾಖೆ ನಿಯಮದಂತೆ 200 ಮೀಟರ್ ಯಾವುದೇ ವಸತಿ, ವಾಣಿಜ್ಯ ಕಟ್ಟಡ ಸೇರಿದಂತೆ ಇತರೆ ಚಟುವಟಿಕೆಗೆ ನಿಷೇಧವಿದೆ. ಇದರಿಂದ ಗ್ರಾಮದ ಅಭಿವೃದ್ಧಿಗೆ ತೊಂದರೆಯಾಗಿದೆ. ಪ್ರವಾಸಿ ತಾಣಗಳ ಅಕ್ಕಪಕ್ಕದಲ್ಲಿ ನೂರಾರು ಮನೆಗಳಿರುವುದರಿಂದ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಐಹೊಳೆ ಗ್ರಾಮವನ್ನು ಸಂಪೂರ್ಣ ಸ್ಥಳಾಂತರಿಸಿ ಪುನರ್‌ವಸತಿ ಕಲ್ಪಿಸಿಕೊಡುವ ಬೇಡಿಕೆ ಹಲವು ವರ್ಷದಿಂದ ನಡೆದಿದೆ.
ಈ ಹಿನ್ನೆಲೆಯಲ್ಲಿ ಐಹೊಳೆ ಗ್ರಾಮವನ್ನು ಭಾಗಶ: 127 ಮನೆಗಳ ಗ್ರಾಮ ಸ್ಥಳಾಂತರವನ್ನು ರದ್ದುಪಡಿಸಿ ಸಂಪೂರ್ಣ ಗ್ರಾಮ ಸ್ಥಳಾಂತರಿಸಬೇಕು. ಐಹೊಳೆ ಗ್ರಾಮವನ್ನು ಬೇರೆಡೆ ಸ್ಥಳಾಂತರಿಸಿ ಯುಕೆಪಿ ಮಾದರಿಯಲ್ಲಿ ನವನಗರ ನಿರ್ಮಾಣವಾದಂತೆ ಐಹೊಳೆಯನ್ನು ನಿರ್ಮಾಣ ಮಾಡುವಲ್ಲಿ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಅವರು ಕೂಡಲೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.