ಹಾವೇರಿ: ಹಾವೇರಿ ಎಂದರೆ ನೆನಪಾಗುವುದು ಇಲ್ಲಿನ ಏಲಕ್ಕಿ ಕಂಪು. ಏಲಕ್ಕಿ ವ್ಯಾಪಾರದಿಂದ ಹಾವೇರಿ ನಗರ ಪ್ರಸಿದ್ಧಿಯಾಗಿದೆ. 19 ನೇ ಶತಮಾನದಲ್ಲಿ ನಿರಂತರ ಮಳೆ ಬೀಳುತ್ತಿದ್ದ ಹಾಸನದ ಸಕಲೇಶಪುರ, ಮಡಿಕೇರಿ, ಚಿಕ್ಕಮಗಳೂರ ಜತೆಗೆ ಮೂಡಗೆರೆ ಭಾಗದ ಪ್ರದೇಶಗಳಿಗೆ ಇಲ್ಲಿಯ ವ್ಯಾಪಾರಸ್ಥರು ದವಸ-ಧಾನ್ಯಗಳನ್ನು ಬಂಡಿಗಳಲ್ಲಿಕಳಿಸುತ್ತಿದ್ದರು. ಬರುವಾಗ ಏಲಕ್ಕಿಯನ್ನು ಖರೀದಿಸುವ ಮೂಲಕ ವ್ಯಾಪಾರ ವಿನಿಮಯಕ್ಕೆ ಹೆಸರಾಗಿದ್ದರು.
ಸಂಸ್ಕರಣೆ ಹೇಗೆ?
ಹಾವೇರಿ ಬಣ್ಣದ ಮಠದ ಆವರಣದಲ್ಲಿ ಮೂರು ಬಾವಿಗಳು ಇದ್ದವು. ಈ ನೀರು ಔಷಧಿ ಗುಣ ಹೊಂದಿದ್ದ ಕಾರಣಕ್ಕೆ ಕಾಡು ಏಲಕ್ಕಿಯನ್ನು ಈ ನೀರಲ್ಲಿ ತೊಳೆದು ಗಂಧಕ ಸೇರಿದಂತೆ ವಿಶಿಷ್ಠ ರೀತಿಯಲ್ಲಿ ಸಂಸ್ಕರಿಸಿದ ನಂತರ ಒಂದು ವಾರದಲ್ಲಿ ಏಲಕ್ಕಿ ಮಲ್ಲಿಗೆ ಹೂವು ರೀತಿ ಆಕರ್ಷಿಸುತ್ತಿತ್ತು. ಈ ಬಾವಿ ನೀರು ಏಲಕ್ಕಿ ತೊಳೆಯುವ ಬಾವಿ ಎಂದೇ ಈಗಲೂ ಪ್ರಸಿದ್ಧಿಯಾಗಿದೆ.
ಮಾರಾಟ:
19 ನೇ ಶತಮಾನದಲ್ಲಿ ರೈಲು, ವಾಹನಗಳ ಸೌಲಭ್ಯ ಇರಲಿಲ್ಲ. ಏಲಕ್ಕಿಯನ್ನು ಕನಿಷ್ಠ 15 ರಿಂದ 20 ಬಂಡಿಗಳಲ್ಲಿ ವ್ಯಾಪಾರಸ್ಥರೆಲ್ಲರೂ ನಾಗಪೂರ, ಮುಂಬೈ ಹೀಗೆ ಬೇಡಿಕೆ ಬಂದ ಕಡೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಒಮ್ಮೆ ಹೋದರೆ ಕನಿಷ್ಠ 6 ತಿಂಗಳ ನಂತರ ಊರಿಗೆ ಬರುವ ಪರಿಸ್ಥಿತಿ ಇತ್ತು. ಬರುವಾಗ ವ್ಯಾಪಾರಕ್ಕೆ ಪೂರಕ ಸಾಮಗ್ರಿ ಹಾಗೂ ಹಣ (ಬೆಳ್ಳಿ ನಾಣ್ಯ)ವನ್ನು ಗೋಣಿ ಚೀಲಗಳಲ್ಲಿ ಬಂಡಿಗಳಲ್ಲಿ ಹೇರಿಕೊಂಡು ಬರುತ್ತಿದ್ದ ಪರಿಣಾಮ ಪ್ರತಿಯೊಬ್ಬ ವ್ಯಾಪಾರಸ್ಥರ ಬಳಿಯೂ ಗನ್ ಸೇರಿದಂತೆ ಆತ್ಮರಕ್ಷಣೆಗೆ ಆಯುಧಗಳು ಇರುತ್ತಿದ್ದವು.
ಕಾಡಂಚಿನ ಈ ಪ್ರದೇಶಗಳಲ್ಲಿ ಪ್ರಾಕೃತಿಕವಾಗಿ ಏಲಕ್ಕಿ ಬೆಳೆಯುತ್ತಿತ್ತೇ ವಿನಃ ಯಾರೂ ಇದನ್ನು ಬೆಳೆಯುತ್ತಿರಲಿಲ್ಲ. ಅಲ್ಲಿಯ ಜನ ಅದರ ಮಹತ್ವದ ಬಗೆಗೆ ಅಷ್ಟಾಗಿ ತಿಳಿದಿರದ ಹಿನ್ನೆಲೆಯಲ್ಲಿ ಅತಿ ಕಡಿಮೆ ಬೆಲೆಗೆ ಕಾಡು ಏಲಕ್ಕಿ ಸಿಗುತ್ತಿತ್ತು. ಇದನ್ನೇ ಹಾವೇರಿ ವ್ಯಾಪಾರಸ್ಥರು ವಿಶಿಷ್ಠ ರೀತಿಯಲ್ಲಿ ಸಂಸ್ಕರಿಸಿ ಘಮ ಘಮ ಪರಿಮಳ ಜತೆಗೆ ಮಲ್ಲಿಗೆ ಹೂವು ರೀತಿಯಲ್ಲಿ ಬೆಳ್ಳಗೆ ಫಳ ಫಳ ಹೊಳೆಯುವಂತೆ ಸಿದ್ಧಪಡಿಸಿ ದೂರದ ಮುಂಬೈ, ದಿಲ್ಲಿ, ನಾಗಪೂರ ಮುಂತಾದ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಪರಿಣಾಮ ಹಾವೇರಿ ಏಲಕ್ಕಿಗೆ ಬಹು ಬೇಡಿಕೆ ಇತ್ತು.