ಬಾಗಲಕೋಟೆ
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರಕಾರ ಸಮರ್ಥ ವಾದ ಮಂಡಿಸಿದೆ ಎಂದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಡ್ಯಾಂನಲ್ಲಿ ಎಷ್ಟು ನೀರು ಇದೆ ಎಂಬ ಅರಿವು ಪ್ರಾಧಿಕಾರಕ್ಕೆ ಇದೆ. ಸಂಕಷ್ಟ ಸಮಯದಲ್ಲಾದರೂ ಒಂದು ಸೂತ್ರ ಇರಬೇಕಿತ್ತು. ೯ ವರ್ಷದಿಂದ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಪರಿಹಾರ ಸೂತ್ರ ಕಂಡುಕೊಳ್ಳಬೇಕಿತ್ತು. ಮಳೆ ಬಂದು ಸಾಕಷ್ಟು ನೀರಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಬರಗಾಲದ ಸಂದರ್ಭದಲ್ಲಾದರೂ ಸೂತ್ರ ಅವಶ್ಯಕ ಎಂದರು.
ಕಾವೇರಿ ನೀರು ವಿಚಾರವಾಗಿ ಮಾತನಾಡುವ ಬಿಜೆಪಿಯವರು ಪ್ರಧಾನಿ ನೇತೃತ್ವದಲ್ಲಿ ೪ ರಾಜ್ಯಗಳ ಸಿಎಂಗಳ ಸಭೆ ಕರೆಯಬಹುದಿತ್ತು. ಬಿಜೆಪಿಯ ೨೫ ಸಂಸದರು ಪ್ರಧಾನಿ ಭೇಟಿ ಆಗಿ ಇಲ್ಲಿನ ವಸ್ತುಸ್ಥಿತಿ ಹೇಳಬೇಕಿತ್ತು. ಪರಿಸ್ಥಿತಿಯ ಅರಿವಿದ್ದರೂ ಪ್ರಧಾನ ಮಂತ್ರಿಗಳ ಮಾತನಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ಪ್ರಾಧಿಕಾರ ರಚಿಸಿದ್ದು ಬಿಜೆಪಿಯವರು
ಕಾವೇರಿ ನದಿ ನೀರಿಗಾಗಿ ರಾಜ್ಯ ಸರಕಾರದ ವಿರುದ್ಧ ಯಾರೂ ಹೋರಾಡುತ್ತಿಲ್ಲ. ಕೇಂದ್ರದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಡ್ಯಾಂನಲ್ಲಿ ನೀರಿಲ್ಲದಿರುವುದು ಜನರಿಗೂ ತಿಳಿದಿದೆ. ಪ್ರಾಧಿಕಾರ ಮಾಡಿದ್ದೇ ಬಿಜೆಪಿ ಸರಕಾರ. ಅವರ ಅಣತಿಯಂತೆ ಅದು ನಡೆದುಕೊಳ್ಳುತ್ತಿದೆ. ಈ ವರ್ಷ ಮಳೆ ಆಗಿ ಡ್ಯಾಂ ತುಂಬಿದ್ದರೆ ನೀರು ಬಿಡಬಹುದಿತ್ತು. ನಿರಂತರವಾಗಿ ೩ ಸಾವಿರ ಕ್ಯೂಸೆಕ್ ಸಹಜವಾಗಿ ಹೋಗುತ್ತದೆ. ಅದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ. ಬಿಜೆಪಿಯವರು ಎಡಬಿಡಂಗಿ ನಾಯಕರು. ಪ್ರಧಾನಿ ಎದುರು ನೆಲಜಲದ ಕುರಿತು ಮಾತನಾಡುವುದಿಲ್ಲ ಎಂದರು.
ಈ ಸರಕಾರ ಬಹಳ ದಿನ ಉಳಿಯಲ್ಲ, ಜನವರಿ ನಂತರ ಬೀಳುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಯತ್ನಾಳ, ಈಶ್ವರಪ್ಪ, ಸಿ.ಟಿ.ರವಿ, ರೇಣುಕಾಚಾರ್ಯ ಅವರ ಬಗ್ಗೆ ಹೆಚ್ಚು ಮಾತನಾಡದಿರುವುದೇ ಒಳ್ಳೆಯದು ಎಂದರು.
ರಾಜ್ಯವನ್ನು ಕುಡುಕರ ತೋಟ ಮಾಡಲು ಹೊರಟಿದ್ದಾರೆಂಬ ಮಾಜಿ ಸಿಎಂ ಎಚ್‌ಡಿಕೆ ಹೇಳಿಕೆಗೆ, ಪಾನ ನಿಷೇಧ ಮಾಡಿ ಬಿಡಲಿ, ನಾವೇನು ಬೇಡ ಅಂತಾ ಹೇಳಿದ್ದೀವಾ? ವಿರೋಧ ಪಕ್ಷದವರೆಲ್ಲ ಗುಜರಾತ್‌ನಲ್ಲಿರುವಂತೆ ಪಾನ ನಿಷೇಧ ಮಾಡಿ ಎಂದು ಹೇಳಿ ಬಿಡಲಿ ಎಂದು ವಿಪಕ್ಷ ನಾಯಕರಿಗೆ ರಾಮಲಿಂಗಾರೆಡ್ಡಿ ಸವಾಲ್ ಹಾಕಿದರು.
ಹೆಚ್ಚಿನ ಸಾಲ ಮಾಡಿದ್ದೇ ಬಿಜೆಪಿಗರು
ರಾಜ್ಯದಲ್ಲಿ ಬರ ಪರಿಹಾರ ವಿತರಣೆ ಯಾವಾಗ ಎನ್ನುವ ಪ್ರಶ್ನೆಗೆ, ನಾವು ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಯನ್ನೂ ಮಾಡುತ್ತಿದ್ದೇವೆ. ಬರಗಾಲವನ್ನು ಸಮರ್ಥವಾಗಿ ಎದುರಿಸುತ್ತೇವೆ. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರಿದಲ್ಲಿದ್ದು ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸೇರಿ ಮೂರು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ೧೨೦ ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ಸ್ವಾತಂತ್ರಾö್ಯ ನಂತರ ೨೦೧೪ರ ವರೆಗೆ ದೇಶದ ಸಾಲ ೫೨ ಲಕ್ಷ ಕೋಟಿ ಸಾಲ ಇತ್ತು. ಆಮೇಲೆ ಇವರು ೧೨೦ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದೇ ಬಿಜೆಪಿಯವರು ದೇಶದಲ್ಲಿ ಕಡಿದು ಕಟ್ಟೆ ಹಾಕಿದ್ದು ಎಂದು ಸಚಿವರು ವಾಗ್ದಾಳಿ ನಡೆಸಿದರು.
ಡಿಸಿಎಂ ವಿಚಾರ ಹೈಕಮಾಂಡ್ ನಿರ್ಧಾರ
ಮೂರು ಡಿಸಿಎಂ ಸ್ಥಾನ ನೀಡಬೇಕು ಎಂಬ ಸಚಿವ ಕೆ.ಎನ್.ರಾಜಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಸರಕಾರ ನಡೆದುಕೊಂಡು ಹೋಗುತ್ತಿದೆ. ಈ ವಿಚಾರ ಅನವಶ್ಯಕ. ಡಿಸಿಎಂ ಸ್ಥಾನ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆ ಸ್ಥಾನಕ್ಕೆ ನಾನು ಕಾರ್ಡ್ ಅಪ್ಲಾಯ್ ಮಾಡಿಲ್ಲ. ಮಂತ್ರಿ ಮಾಡಿ ಎಂದು ಯಾರನ್ನೂ ಕೇಳಿಲ್ಲ ಎಂದರು.
ಗ್ಯಾರಂಟಿಗಳೊಂದಿಗೆ ವಿವಿಧ ಅಭಿವೃದ್ಧಿ
ಸರಕಾರ ಕುಂಟುತ್ತ ಸಾಗುತ್ತಿಲ್ಲ ಬದಲಾಗಿ ಶಕ್ತಿ ಯೋಜನೆಯಿಂದ ೬೫ ಕೋಟಿ ಜನ ಓಡಾಡುತ್ತಿದ್ದಾರೆ. ಗೃಹಲಕ್ಷಿö್ಮ ಯೋಜನೆಗೆ ೧ ಕೋಟಿ ೪೦ ಲಕ್ಷ ಮಹಿಳೆಯರು ನೋಂದಣಿ ಮಾಡಿಡ್ಡು ಗೃಹಜ್ಯೋತಿಯಲ್ಲೂ ೧ ಕೋಟಿಗಿಂತಲೂ ಹೆಚ್ಚು ಫಲಾನುಭವಿಗಳಾಗಿದ್ದಾರೆ. ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿ ಬದಲು ಹಣ ಜಮಾ ಆಗಿದೆ. ಆದರೆ ೯ ವರ್ಷದಿಂದ ಅಧಿಕಾರದಲ್ಲಿರುವ ಮೋದಿಯವರು ಮಾಡಿದ್ದಾದರೂ ಏನು? ವಿದೇಶದಲ್ಲಿನ ಕಪ್ಪು ಹಣದ ಆಸೆ ತೋರಿಸಿದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇವೆಂದರು. ಪೆಟ್ರೋಲ್ ೪೦ ರೂ., ಡಿಸೇಲ್ ೩೦ ರೂ.ಗೆ, ಬೆಲೆಗಳನ್ನೆಲ್ಲ ಇಳಿಕೆ ಮಾಡುತ್ತೇವೆಂದು ಹೇಳಿದರು. ಇವೆಲ್ಲ ಈಡೇರಿವೆಯೇ ಎಂದು ಪ್ರಶ್ನಿಸಿದರು.
ಬೆಂಗಳೂರು ಬಂದ್ ದಿನ ಬಸ್ ಸಂಚಾರದ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಬಂದ್ ಸ್ವರೂಪ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ಹಿಂದೆಯೂ ರಾಜ್ಯದ ನೀರು, ಭಾಷೆ ವಿಚಾರವಾಗಿ ಬಂದ್ ಕರೆ ನೀಡಿದಾಗ ಎಲ್ಲ ಟ್ರಾನ್ಸ್ಫೋರ್ಟ್ಗಳು ಭಾಗವಹಿಸಿದ್ದವು. ಪ್ರತಿಭಟನೆ ಸಾಂಕೇತಿಕವಾಗಿ ಮಾಡುತ್ತಾರೋ ಅಥವಾ ಬಸ್ ಬಂದ್ ಮಾಡುತ್ತಾರೋ ಎಂಬುದು ಸಂಘಟನೆಗಳ ನಿರ್ಧಾರದ ಮೇಲಿದೆ ಎಂದು ಹೇಳಿದರು.