This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Agriculture NewsLocal NewsPolitics NewsState News

Cauvery water dispute : ಕಾವೇರಿ ವಿಷಯದಲ್ಲಿ ಧರ್ಮಸಿಂಗ್, ಸಿದ್ದರಾಮಯ್ಯರ ದಾರಿ ತಪ್ಪಿಸಿದ್ದು ಸಾಲದೆ? ಮೊಯ್ಲಿಗೆ ಎಚ್‌ಡಿಕೆ ತಿರುಗೇಟು!

Cauvery water dispute : ಕಾವೇರಿ ವಿಷಯದಲ್ಲಿ ಧರ್ಮಸಿಂಗ್, ಸಿದ್ದರಾಮಯ್ಯರ ದಾರಿ ತಪ್ಪಿಸಿದ್ದು ಸಾಲದೆ? ಮೊಯ್ಲಿಗೆ ಎಚ್‌ಡಿಕೆ ತಿರುಗೇಟು!

ಬೆಂಗಳೂರು: ರಾಜ್ಯ ನೀರಾವರಿಗೆ ಮಣ್ಣಿನ ಮಕ್ಕಳಿಂದ ಅನ್ಯಾಯವಾಗಿದೆ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ (Former CM Veerappa Moily) ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ಟ್ರಿಬ್ಯುನಲ್ ರಚಿಸುವಾಗ ಈ ಮಹಾನುಭಾವನ ಕೊಡುಗೆ ಏನು? ಅದರ ರಚನೆ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (Former Prime Minister HD Deve Gowda) ಹೋರಾಟ ನಡೆಸುತ್ತಿದ್ದಾಗ ಇವರ ಪಾತ್ರ ಏನಾಗಿತ್ತು? 1962ರಿಂದ ಕಾವೇರಿ ನೀರಿನ (Cauvery water) ಹಕ್ಕಿಗಾಗಿ ಜೀವನ ಮೀಸಲಿಟ್ಟ ಆ ಮಣ್ಣಿನಮಗನ ಹೋರಾಟದ ಫಲ ಏನೆಂಬುದು ಇವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಕಾವೇರಿ ಜಲ ವಿವಾದದ (Cauvery water dispute) ಬಗ್ಗೆ ಖಾರವಾಗಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಬುಧವಾರ (ಸೆಪ್ಟೆಂಬರ್‌ 13) ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ನೆಲಮಂಗಲದಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಭಾಷಣ ಮಾಡಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಪ್ಪು ಹೇಳಿಕೆ ನೀಡಿದ್ದಾರೆ. ಹಸಿ ಸುಳ್ಳುಗಳನ್ನು ಹೇಳಿದ್ದಾರೆ. ಮಣ್ಣಿನ ಮಕ್ಕಳಿಂದ‌ ಕಾವೇರಿಗೆ ದ್ರೋಹ ಆಗಿದೆ ಅಂತ ಹೇಳಿದ್ದಾರೆ. ಆದರೆ, ತಮ್ಮಿಂದ ಏನು ಆಗಿದೆ ಎನ್ನುವುದನ್ನು ಹೇಳಬೇಕಿತ್ತು. ಆದರೆ, ಬರೀ ಸತ್ಯವನ್ನೇ ಹೇಳಿ ಜನರ ಹಾದಿ ತಪ್ಪಿಸಿದ್ದಾರೆ ಎಂದು ಹೇಳಿದರು.

ಮೊಯ್ಲಿ ನೀರಾವರಿಗೆ ಮಾಡಿದ್ದೆಲ್ಲ ಅನ್ಯಾಯ
ಇವರಿಂದ ನೀರಾವರಿಗೆ ನ್ಯಾಯ ಸಿಕ್ಕಿದ್ದು ಏನೂ ಇಲ್ಲ. ಆಗಿರುವುದಿಲ್ಲ ಅನ್ಯಾಯವೇ. ಹಿಂದೆ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್, ಉಪ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರನ್ನು ಕಾವೇರಿ ವಿಷಯದಲ್ಲಿ ದಾರಿ ತಪ್ಪಿಸಿದ್ದು ಇದೇ ವೀರಪ್ಪ ಮೊಯ್ಲಿ ಎಂದು ‌ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.

ಪಿಯರ್‌ಲೆಸ್‌ನಿಂದ ಸಾಲ ತಂದು ಸಂಬಳ ಕೊಟ್ಟರು
ಈ ಮಹಾನುಭಾವರು ಎರಡು ವರ್ಷ ಮುಖ್ಯಮಂತ್ರಿ ಆಗಿದ್ದರು. ಈ ವ್ಯಕ್ತಿ ಅಧಿಕಾರ ಕಳೆದುಕೊಂಡು ಮನೆಗೆ ಹೋಗುವಾಗ ಬೊಕ್ಕಸವನ್ನು ದಿವಾಳಿ ಮಾಡಿದ್ದರು. ಸರ್ಕಾರಿ ನೌಕರರಿಗೆ ಸಂಬಳ ಕೊಡಲಿಕ್ಕೆ ಹಣ ಇರಲಿಲ್ಲ. ಆಗ ಪಶ್ಚಿಮ ಬಂಗಾಳದ ಪಿಯರ್‌ಲೆಸ್‌ ಸಂಸ್ಥೆಗೆ ರಾಜ್ಯವನ್ನು ಒತ್ತೆ ಇಟ್ಟು ಸಾಲ ತಂದವರು ಇವರು. ಇಂಥವರು ಮಣ್ಣಿನಮಕ್ಕಳಿಂದ ನೀರಾವರಿಗೆ ಅನ್ಯಾಯ ಆಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಸರಸ್ವತಿ ಪುತ್ರರ ಬಾಯಲ್ಲಿ ಸುಳ್ಳು ಬರಬಹುದೇ?
“ಓಹೋ.. ಇವರು ಕವಿ ಸರ್ವೋತ್ತೋಮರು, ಮಹಾಕವಿಗಳು. ನಮ್ಮ ಕುವೆಂಪು ಅವರಿಗಿಂತ ಮಹಾನ್ ಕವಿಗಳು.. ರಾಮಾಯಣವನ್ನು ಮಹಾನ್ವೇಷಣೆ ಮಾಡಿ ಮಹಾಕಾವ್ಯ ಬರೆದ ಮಹಾನುಭಾವರು. ಸರಸ್ವತಿ ಸಮ್ಮಾನ ಪುರಸ್ಕಾರ ಪಡೆದ ಸರಸ್ವತಿ ಪುತ್ರರು. ಇಂಥ ಸರಸ್ವತಿ ಪುತ್ರರ ಬಾಯಲ್ಲಿ ಸುಳ್ಳು ಬರಬಹುದೇ? ಎಂದು ಕುಮಾರಸ್ವಾಮಿಅವರು ವೀರಪ್ಪ ಮೊಯಿಲಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕಾವೇರಿ ಟ್ರಿಬ್ಯೂನಲ್ ರಚಿಸುವಾಗ ಏನು ಮಾಡಿದ್ದೀರಿ?:
ಕಾವೇರಿ ಟ್ರಿಬ್ಯುನಲ್ ರಚಿಸುವಾಗ ಈ ಮಹಾನುಭಾವನ ಕೊಡುಗೆ ಏನು? ಅದರ ರಚನೆ ವಿರುದ್ಧ ದೇವೇಗೌಡರು ಹೋರಾಟ ನಡೆಸುತ್ತಿದ್ದಾಗ ಇವರ ಪಾತ್ರ ಏನಾಗಿತ್ತು? 1962ರಿಂದ ಕಾವೇರಿ ನೀರಿನ ಹಕ್ಕಿಗಾಗಿ ಜೀವನ ಮೀಸಲಿಟ್ಟ ಆ ಮಣ್ಣಿನಮಗನ ಹೋರಾಟದ ಫಲ ಏನೆಂಬುದು ಇವರಿಗೆ ಗೊತ್ತಿಲ್ಲವೇ? ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳು ಹೇಗೆ ನಿರ್ಮಾಣ ಆದವು? ಇವರ ಸಾಧನೆ ಏನು? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ಸರ್ಕಾರಕ್ಕೆ ಮೊಯ್ಲಿ ಸಲಹೆ ಕೊಡಲಿ
ರಾಜ್ಯದ ನೀರಾವರಿಗೆ ಇಷ್ಟೆಲ್ಲ ಕೊಡುಗೆ ನೀಡಿದ ದೇವೆಗೌಡರನ್ನು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಿದರಲ್ಲ? ಹಾಗಾದರೆ, ಇವರ ಕೊಡುಗೆ ಏನು ಎಂಬ ಬಗ್ಗೆ ಸತ್ಯ ಹೇಳಬೇಕೇ ವಿನಾ ಸುಳ್ಳು ಹೇಳಬಾರದಲ್ಲವೇ? ಇವರಿಂದ ನಾವು ಪಾಠ ಹೇಳಿಸಿಕೊಳ್ಳಬೇಕಾ? ಪಾಪ.. ಇವರನ್ನು ಕರೆಸಿ ಕೂರಿಸಿಕೊಂಡು ಸರ್ಕಾರ ಸಲಹೆ ಪಡೆದುಕೊಳ್ಳಲಿ. ನಮಗಿಂತ ಅವರೇ ಒಳ್ಳೆಯ ಸಲಹೆ ಕೊಡುತ್ತಾರೆ. ನಮ್ಮನ್ನು ಕರೆದರೆ ಉಪಯೋಗ ಏನು?‌ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ರಾಜ್ಯದ ನೀರಾವರಿ ಅನ್ಯಾಯದ ಅಧ್ಯಾಯಗಳನ್ನು ಒಮ್ಮೆ ತಿರುವಿ ಹಾಕಿದರು ಇವರು ಎಸಗಿದ ಅನ್ಯಾಯಗಳೇನು ಎನ್ನುವುದು ಗೊತ್ತಾಗುತ್ತದೆ. ಯಾವ ಯಾವ ಸಂದರ್ಭದಲ್ಲಿ ಆ ಮಹಾನುಭಾವರಿಂದ ಏನೇನಾಯ್ತು ಎನ್ನುವುದು ತಿಳಿಯುತ್ತದೆ. ಧರಂಸಿಂಗ್‌ ಅವರನ್ನೇ ದಾರಿ ತಪ್ಪಿಸಿದ್ದ ಈ ವ್ಯಕ್ತಿಯಿಂದಲೇ ಸರಕಾರ ಸಲಹೆ ಸ್ವೀಕರಿಸಲಿ ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರಕ್ಕೆ ನಾಡಿನ ಜನರ ಹಿತರಕ್ಷಣೆಯ ತಿಳಿವಳಿಕೆಯೂ ಇಲ್ಲ, ಕಾಳಜಿಯೂ ಇಲ್ಲ. ಜನರ ಹಿತರಕ್ಷಣೆ ಮಾಡುವ ತಾಕತ್ತು ಇಲ್ಲ, ದಮ್ಮು ಎರಡೂ ಇಲ್ಲ. ಹೀಗಾದರೆ, ರೈತರ ಬೆಳೆಗಳಿಗೆ, ಬೆಂಗಳೂರಿಗೆ ಕುಡಿಯುವ ಎಲ್ಲಿಂದ ತಂದು ಕೊಡುತ್ತಾರೆ? ಎಂದು ಎಚ್.ಡಿ. ಕುಮಾರಸ್ವಾಮಿ‌ ಪ್ರಶ್ನಿಸಿದರು.

ತಮಿಳುನಾಡಿನ ನೀರು ಬಳಕೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯಾ?:
ತಮಿಳುನಾಡಿನಲ್ಲಿ ಎಷ್ಟು ಎಕರೆ ಬೆಳೆ ಬೆಳೆದಿದ್ದಾರೆ. ಎಷ್ಟು ನೀರಾವರಿ ಭೂಮಿಯನ್ನು ವಿಸ್ತರಣೆ ಮಾಡಿಕೊಂಡಿದ್ದಾರೆ. ಈವರೆಗೆ ಎಷ್ಟು ನೀರು ನೀಡಲಾಗಿದೆ. ಈ ಎಲ್ಲ ಮಾಹಿತಿ ರಾಜ್ಯ ಸರ್ಕಾರಕ್ಕೆ ಇದೆಯಾ? ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಜಲ ನಿಯಂತ್ರಣ ಸಮಿತಿಗೆ ಇವರು ಮಾಹಿತಿ ಕೊಟ್ಟಿದ್ದಾರೆಯೇ ಎಂದು ಎಚ್.ಡಿ. ಕುಮಾರಸ್ವಾಮಿ ಕೇಳಿದರು.

ಹಿಂದೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ರಚನೆ ಮಾಡುವಾಗಲೇ ನಾವು ಉಗ್ರವಾಗಿ ಪ್ರತಿಭಟಿಸಿದ್ದೆವು. ಆದರೆ, ಕಾಂಗ್ರೆಸ್ ಸರ್ಕಾರಗಳು ಮಾಡಿದ್ದೇನು? ನಿರಂತರವಾಗಿ ರಾಜ್ಯದ ಹಿತ ಕಡೆಗಣಿಸಿದವು. ಈಗ ನೋಡಿದರೆ ಸಂಕಷ್ಟ‌ದ ಸೂತ್ರದ ಬಗ್ಗೆಯೇ ಚಕಾರ ಎತ್ತದೆ ತಮಿಳುನಾಡಿಗೆ ನೀರು ಹರಿಸುತ್ತಿದೆ. ಪದೇಪದೆ ಕರ್ನಾಟಕದ ಮೇಲೆ ದಬ್ಬಾಳಿಕೆ ಮಾಡುವ ಕೆಲಸ ಆಗುತ್ತಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಸಭೆಗೆ ಹೋಗಲಾಗುತ್ತಿಲ್ಲ:
ಕಾವೇರಿ ವಿಚಾರವಾಗಿ ತುರ್ತಾಗಿ ಸರ್ವಪಕ್ಷ ಸಭೆಯನ್ನು ಮುಖ್ಯಮಂತ್ರಿಗಳು ಕರೆದಿದ್ದಾರೆ. ಆದರೆ ನನಗೆ ಪೂರ್ವನಿಗದಿತ ಕಾರ್ಯಕ್ರಮ ಇರುವುದರಿಂದ ಭಾಗಿಯಾಗಲು ಸಾಧ್ಯ ಆಗುತ್ತಿಲ್ಲ. ಹದಿನೈದು ದಿನಗಳ ಹಿಂದೆಯೇ ಹಾಸನ ಕಾರ್ಯಕ್ರಮ‌ ನಿಗದಿ ಆಗಿತ್ತು. ಹೀಗಾಗಿ ನಾನು ಸರ್ವಪಕ್ಷ ಸಭೆಗೆ ಭಾಗಿಯಾಗಲು ಆಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ‌ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Nimma Suddi
";