ಬಾಗಲಕೋಟೆ:
ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಎದುರಿಸುತ್ತಿರುವ ಸಮಸ್ಯೆಗಳಿಗೆ ಧ್ವನಿಯಾಗುವುದಾಗಿ ಜಿ.ಪಂ ಮುಖ್ಯ ಕಾರ್ಯನರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಂಚಾಯತ ಅಭಿವೃದ್ದಿ ಅಧಿಕಾರಿಗಳ, ಕಾರ್ಯದರ್ಶಿಗಳ ಹಾಗೂ ದ್ವಿತೀಯ ದರ್ಜೆ ಸಹಾಯಕ ಕುಂದು ಕೊರತೆಗಳನ್ನು ಆಲಿಸಿದರು.
ಮುಖ್ಯವಾಗಿ ಕೆಲಸದ ಒತ್ತಡ, ಕೆಲಸದ ಹಂಚಿಕೆ, ಪ್ರವಾಸ ಭತ್ಯೆ, ಟೈಮ್ ಬಾಂಡ್ ಬಾಕಿ, ಕಳೆದ 4 ವರ್ಷಗಳಲ್ಲಿ ಜ್ಯೇಷ್ಟತಾ ಪಟ್ಟಿ ತಯಾರಾಗದ ಬಗ್ಗೆ, ಹಿರಿಯ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಹುದ್ದೆ ಬಾಕಿ ಸೇರಿದಂತೆ ಇತರೆ ಸಮಸ್ಯೆಗಳನ್ನು ಆಲಿಸಿದರು.
ಪ್ರತಿಯೊಂದು ಯೋಜನೆಗಳಿಗೆ ಗುರಿಗೆ ಅವಧಿ ವಿಸ್ತರಣೆ, ಖಾಲಿ ಹುದ್ದೆ ನೇಮಕಾತಿ ಸ್ಥಗಿತದಿಂದ ಕೆಲಸಗಳು ಸರಿಯಾಗಿ ಆಗಯತ್ತಿಲ್ಲ. ಖಾಲಿ ಹುದ್ದೆಯ ಕೆಲಸವನ್ನು ಇದ್ದ ಸಿಬ್ಬಂದಿ ನಿರ್ವಹಣೆ ಮಾಡುತ್ತಿದ್ದಾರೆ. ಇದರಿಂದ ಕೆಲಸಗಳು ನಿಗದಿತ ಸಮಯಕ್ಕೆ ಆಗುತ್ತಿಲ್ಲ. ತಾಂತ್ರಿಕ ಸಮಸ್ಯೆಯಿಂದ ತೊಂದರೆ, ಪಂಚಾಯತಿಗೆ ವ್ಯಾಪ್ತಿ ಸೀಮಿತಗೊಳಿಸಿ ಗಡಿ ಗುರುತಿಸುವ ಕಾರ್ಯವಾದರೆ ಮಾತ್ರ ಗ್ರಾಮಠಾಣ ವ್ಯಾಪ್ತಿಗೆ ಬರಲು ಸಾಧ್ಯವಾಗುತ್ತವೆ ಎಂದು ಅಂಕಲಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಸಮಸ್ಯೆಗಳನ್ನು ತೋಡಿಕೊಂಡರು.
ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ವಾರದ ಮಾತನಾಡಿ ಭವನ ನಿರ್ಮಾಣಕ್ಕೆ ನಿವೇಶನ, ಜಿಲ್ಲಾ ಮಟ್ಟದಲ್ಲಿ ಹೆಲ್ಪಲೈನ್, ಕೆಲಸದ ಒತ್ತಡ ಹೆಚ್ಚಾಗುತ್ತಿರುವದರಿಂದ ಪಿಡಿಓಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಗ್ರುಪ್ ಇನ್ಸೂರೆನ್ಸ್ ಅಗತ್ಯವಾಗಿದೆ. ಗುರುತಿನ ಚೀಟಿ, ಟ್ಯಾಬ್ ವ್ಯವಸ್ಥೆ, ಮಾಹಿತಿ ಹಕ್ಕು, ಇತರೆ ಪ್ರಕತಣಗಳಲ್ಲಿ ಬೇರೆಡೆ ಹೋಗಬೇಕಾಗುತ್ತದೆ. ಪ್ರವಾಸ ಭತ್ಯೆ ಪಾವತಿಯಾಗುತ್ತಿಲ್ಲವೆಂದು ಸಭೆಗೆ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಜಿ.ಪಂ ಸಿಇಓ ಉತ್ತಮ ಕಾರ್ಯನಿರ್ವಹಣೆಗೆ ಏನೇ ಬೇಡಿಕೆಗಳಿದ್ದರೂ ಅವುಗಳ ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಸರಕಾರಿ ಹುದ್ದೆಗೆ ಬಂದಾಗ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ಸಮಾಜ, ಜನ ನೆನಪಿಡುವ ರೀತಿಯಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ನೀವು ಮಾಡುವ ಕೆಲಸದಿಂದ ಜನಮನದಲ್ಲಿ ಇರುವ ರೀತಿಯಲ್ಲಿ, ಪ್ರಾಮುಖ್ಯತೆ ಹೆಚ್ಚಿಸುವ ಕೆಲಸವಾಗಬೇಕು. ಸಮಸ್ಯೆಗಳನ್ನು ಮೆಟ್ಟಿ ನಿಂತಾಗ ತೊಂದರೆಗಳು ತಾವಾಗಿಯೇ ಬಗೆ ಹರಿಯುತ್ತವೆ ಎಂದರು.
ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಸೇರಿದಂತೆ ಜಿಲ್ಲೆಯ ಎಲ್ಲ ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.
*ಪ್ರತಿ 3 ತಿಂಗಳಿಗೊಮ್ಮೆ ಸಮಾಲೋಚನಾ ಸಭೆ
————————————-
ಒತ್ತಡದಿಂದ ಕೆಲಸ ಕಾರ್ಯ ಮಾಡುತ್ತಿರುವ ಪಂಚಾಯತ ಅಭಿವೃದ್ದಿ ಅಧಿಕಾರಿ ಸೇರಿದಂತೆ ಇತರೆ ಸಿಬ್ಬಂದಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಯಾಗಾರದ ಜೊತೆಗೆ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗುತ್ತಿದೆ.
– *ಶಶೀಧರ ಕುರೇರ, ಜಿ.ಪಂ ಸಿಇಓ*