ಮೈಸೂರು
ನರೇಂದ್ರಮೋದಿ 3ನೇ ಬಾರಿ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ ಎಂದು ನಮೋ ಬ್ರಿಗೇಡ್ ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಮೈಸೂರಿನಲ್ಲಿ ನಮೋ ಬ್ರಿಗೇಡ್ ಕಾರ್ಯಾಲಯ ಉದ್ಘಾಟನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿಯವರನ್ನು ಸೋಲಿಸಲು ಇಂಡಿಯಾ ಮೈತ್ರಿಕೂಟ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ, ಆದರೆ ಅದು ಕಾರ್ಯಗತವಾಗುವುದಿಲ್ಲ, ರಾಹುಲ್ ಗಾಂಧಿ ಬಗ್ಗೆ ಕಾಂಗ್ರೆಸ್ ನಾಯಕರಿಗೆ ವಿಶ್ವಾಸವಿಲ್ಲ ಎಂದು ವ್ಯಂಗ್ಯವಾಡಿದರು.
ರಾಷ್ಟ್ರದ ವಿಚಾರ ಬಂದಾಗ ಜನರು ನರೇಂದ್ರ ಮೋದಿಯವರ ಜೊತೆ ನಿಲ್ಲುತ್ತಾರೆ. ವಿಧಾನಸಭೆ ಚುನಾವಣೆಯೇ ಬೇರೆ, ಲೋಕಸಭಾ ಚುನಾವಣೆಯೇ ಬೇರೆ ಹಾಗಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದೇ 328 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮೋದಿ 3ನೇ ಅವಧಿಗೂ ಪ್ರಧಾನಿಯಾಗಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾವೇರಿ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ಹೇಳುವ ಮೊದಲು ನೀರು ಬಿಟ್ಟಿದ್ದು ರಾಜ್ಯ ಸರ್ಕಾರ ಇವರು ತಪ್ಪು ಮಾಡಿ ಮೋದಿ ಕಡೆ ಬೊಟ್ಟು ಮಾಡುತ್ತಿದ್ದಾರೆ , ಈ ಹಿಂದೆ ಸಿದ್ದರಾಮಯ್ಯ ಒಳ್ಳೆಯ ಮುಖ್ಯಮಂತ್ರಿ ಆಗಿದ್ರು, ಗ್ಯಾರಂಟಿ ಹೆಸರಲ್ಲಿ ರಾಜ್ಯಕ್ಕೆ ಹೊರೆ ಮಾಡಿ ಕೆಟ್ಟ ಹೆಸರು ತೆಗೆದುಕೊಂಡು ಹೋಗುತ್ತಾರೆ, ಕಾವೇರಿ ವಿಚಾರದಲ್ಲಿ ಕೂಡ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.