ಕೊಪ್ಪಳ:
ಯಲಬುರ್ಗಾ, ಕೂಕನೂರು ತಾಲೂಕು ಸೇರಿ ಕಲ್ಯಾಣ ಕರ್ನಾಟಕದ ಭಾಗದ ರೈತರಿಗೆ ಟ್ರಾನ್ಸಫಾರ್ಮರ್ ಸೇರಿದಂತೆ ಇನ್ನಿತರ ಸೌಲಭ್ಯ ಕೊಡಲು ವಿಳಂಭ ಮಾಡಬಾರದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಕರೆದಿದ್ದ ಜೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿರುವ ಅವರು, ಹಿರಿಯ ಶಾಸಕ ಬಸವರಾಜ್ ರಾಯರಡ್ಡಿ ಅವರು ಇಂಧನ ಇಲಾಖೆಗೆ ಸಂಬಂಧಿಸಿದಂತೆ ಪ್ರಸ್ಥಾಪಿಸಿರುವ ಎಲ್ಲ ಸಮಸ್ಯೆಗಳು ತ್ವರಿತವಾಗಿ ಬಗೆಹರಿಯಬೇಕು. ಯಾವುದೇ ಕಾರಣಕ್ಕೂ ವಿಳಂಭ ಮಾಡುವಂತಿಲ್ಲ.
ಟ್ರಾನ್ಸರ್ಫರ ಸಮಸ್ಯೆಯಿಂದ ರೈತರು ಸಮಸ್ಯೆ ಅನುಭವಿಸುತ್ತಿರುವ ಕುರಿತು ರಾಯರಡ್ಡಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಬಗೆಹರಿಸಿ ಎಂದು ಸೂಚಿಸಿದ್ದಾರೆ.
ಅಲ್ಲದೇ ಶಾಸಕರು ಫೋನ್ ಮಾಡಿದ ಕೂಡಲೇ ಸ್ಪಂದಿಸುವ ಕೆಲಸವಾಗಲಿ, ಸಾರ್ವಜನಿಕ ಹಿತಾಸಕ್ತಿ ಸಂಬಂಧಿಸಿದಂತೆ ವಿಳಂಭ ಧೋರಣೆ ಸಲ್ಲದು ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಸಭೆ ನಡೆದಿರುವ ಕುರಿತು ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಶಾಸಕ ಬಸವರಾಜ ರಾಯರಡ್ಡಿ ಅವರು, ರೈತರಿಗೆ ಟ್ರಾನ್ಸರ್ಫರ ನೀಡುವ ಕುರಿತಂತೆ ಸಮಗ್ರವಾಗಿ ಚರ್ಚೆಯಾಗಿದೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಶೀಘ್ರದಲ್ಲಿಯೇ ಹಂತ- ಹಂತವಾಗಿ ಟ್ರಾನ್ಸರ್ಫಮರ್ ಗಳು ಬರಲಿವೆ.
ಕೇವಲ ನನ್ನ ಕ್ಷೇತ್ರವಲ್ಲದೇ ಕಲ್ಯಾಣ ಕರ್ನಾಟಕ ಭಾಗದ ರೈತರ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಿ, ಸಚಿವರ ನೇತೃತ್ವದಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕೆಪಿಟಿಸಿಎಲ್ ಎಂಡಿ, ಜೆಸ್ಕಾಂ ಎಂಡಿ ಹಾಗೂ ಸ್ಥಳೀಯ ಅಧಿಕಾರಿಗಳಿದ್ದರು.
ರೈತರ ಸಮಸ್ಯೆ ಬಗೆಹರಿಸಿ, ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ ಎಂದು ಶಾಸಕ ಬಸವರಾಜ ರಾಯರಡ್ಡಿ ಅವರು, ಈಚೆಗೆ ಸಿಎಂಗೆ ಪತ್ರ ಬರೆದ ಹಿನ್ನಲೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.
ಇಂದು ಗದಗ-ವಾಡಿ ರೈಲ್ವೆ ಮಾರ್ಗದ ಸಭೆ:
ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರ ಸ್ವಗ್ರಾಮ ತಳಕಲ್ ಮಧ್ಯದಲ್ಲಿ ಹಾದು ಹೋಗಿರುವ ಗದಗ- ವಾಡಿ ರೈಲ್ವೆ ಮಾರ್ಗದ ಪ್ರಗತಿ ಪರಿಶೀಲನೆ ಸಭೆ ಸೆ.06 ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನಲ್ಲಿ ನಿಗಧಿಯಾಗಿದೆ.
ಬೃಹತ್ ಮತ್ತು ಸಣ್ಣ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು, ಶಾಸಕ ಬಸವರಾಜ ರಾಯರಡ್ಡಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಗದಗ- ವಾಡಿ ರೈಲ್ವೆ ಮಾರ್ಗದ ಕುರಿತು ಸಭೆ ಕರೆಯುವಂತೆ ಶಾಸಕ ಬಸವರಾಜ ರಾಯರಡ್ಡಿ ಪತ್ರ ಬರೆದ ಹಿನ್ನಲೆ ಮಿಟಿಂಗ್ ನಿಗಧಿಯಾಗಿದೆ.