ಬಾಗಲಕೋಟೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಿ.ದೇವರಾಜ ಅರಸುರವರ 108ನೇ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕ್ರೀಡಾಕೂಟಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಚವ್ಹಾನ್ ಚಾಲನೆ ನೀಡಿದರು.
ನವನಗರದ ಸೆಕ್ಟರ ನಂ.88 ರಲ್ಲಿರುವ ಇಂದಿರಾಗಾಂಧಿ ಶಾಲೆಯ ಆವರಣದಲ್ಲಿ ಜರುಗಿದ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ತಾಲೂಕಾ ಮಟ್ಟದಿಂದ ಆಯ್ಕೆಯಾಗಿ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಸೋಲು-ಗೋಲುವನ್ನು ಸಮನಾಗಿ ತೆಗೆದುಕೊಂಡು ಕ್ರೀಡಾ ಮನೋಭಾವದಿಂದ ಉತ್ತಮವಾಗಿ ಆಟವಾಡಬೇಕು. ಕ್ರೀಡೆ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದ್ದು, ದೈಹಿಕ ಮತ್ತು ಮಾನಸಿಕ ಅಭಿವೃದ್ದಿಗೆ ಮೂಲವಾಗಿದೆ ಎಂದರು.
ನಿಲಯ ಪಾಲಕ ಬಸವರಾಜ ಮಾತನಾಡಿ ಕ್ರೀಡಾ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಇರಬೇಕು. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಸಮನಾಗಿ ತೆಗೆದುಕೊಳ್ಳಬೇಕು. ಸೋತಾಗ ಗೆಲ್ಲಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಶಾಲೆಯ ಪ್ರಾಚಾರ್ಯ ಜಯಶ್ರೀ ಮುರನಾಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮ್ಯಾನೇಜರ ಶಿವು ದರಗಾದ, ಹಿಂದುಳಿದ ವರ್ಗಗಳ ತಾಲೂಕಾ ವಿಸ್ತರಣಾಧಿಕಾರಿ ಬಡಿಗೇರ, ಪ್ರಭಾರಿ ಪ್ರಾಚಾರ್ಯ ಪರಶುರಾಮ ಲಮಾಣಿ, ಕ್ರೀಡಾಕೂಟದ ನಿರ್ಣಾಯಕರಾದ ಶಶಿಕಾಂತ ಬಂದೆನವಾಜ, ಸುಧಾ, ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ಖೋಖೋ ಮತ್ತು ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.