ನಿಮ್ಮ ಸುದ್ದಿ ಬೆಳಗಾವಿ
ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ವೃತ್ತಿ ನೇಕಾರರು ಡಿಸೆಂಬರ್ 21 ರಂದು ಹಳೆ ಬೆಳಗಾವಿ ನಾಕಾದಿಂದ ಸುವರ್ಣ ವಿಧಾನಸೌಧದವರೆಗೆ ಪಾದಯಾತ್ರೆ ಮೂಲಕ ತೆರಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಮರ್ಪಿಸಿದರು.
ರಾಜ್ಯದ ರೈತರಿಗೆ ಜಾರಿಗೆ ತಂದಿರುವ 0’/. ಬಡ್ಡಿ ದರದ ಸಾಲ ಯೋಜನೆ ನೇಕಾರರಿಗೆ ವಿಸ್ತರಿಸುವುದು,ರೈತ ಮಕ್ಕಳಿಗೆ ನೀಡುವಂತೇ ನೇಕಾರ ಮಕ್ಕಳಿಗೂ ವಿದ್ಯಾನಿಧಿ ವಿಸ್ತರಿಸುವುದು,ಜವಳಿ ಇಲಾಖೆಯಿಂದ ನೀಡುವ ಮಗ್ಗ ಹಾಗೂ ಮಗ್ಗದ ಪರಿಕರಗಳ ಮೇಲಿನ ರಿಯಾಯತಿ ಎಸ್ಸಿ ಎಸ್ಟಿ ಸಮುದಾಯಕ್ಕೆ ನೀಡುವಂತೆ ನೇಕಾರರಿಗೂ ಸೂಕ್ತ ರಿಯಾಯಿತಿ ವಿಸ್ತರಿಸುವುದು, ಕಚ್ಚಾ ಮಾಲುಗಳ ಬೆಲೆ ಏರಿಕೆ ಪಕ್ಕಾ ಮಾಲುಗಳ ಬೆಲೆ ಇಳಿಕೆಯಿಂದ ನೇಕಾರ ಸಹಕಾರ ಸಂಘಗಳು ಸಂಕಷ್ಟದಲ್ಲಿರುವ ಕಾರಣ ಶೇ 40 ರಷ್ಟು ರಿಬೇಟ್ ಜಾರಿ,
ಮಗ್ಗಗಳ ನಿಗಮ ಹಾಗೂ ಆಯಾ ನಿಗಮಗಳ ಅಡಿಯಲ್ಲಿರುವ ನೇಕಾರರ ಅಭ್ಯುದಯಕ್ಕೆ ಬರುವ ಬಜೆಟ್ ನಲ್ಲಿ 1000 ಕೋಟಿ ರೂ.ಗಳ ಪ್ಯಾಕೇಜ್ ಮೀಸಲಿರಿಸಿ, ಅನುಷ್ಠಾನ ಗೊಳಿಸಬೇಕು, ವಿದ್ಯುತ್ ಚಾಲಿತ ಮಗ್ಗಗಳನ್ನು ಉನ್ನತಿಕರಿಸಿದ ಕೈಮಗ್ಗ ಎಂದು ಘೋಷಣೆ,
ಕೂಲಿ ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ ಅಂಬೇಡ್ಕರ್ ಹಸ್ತ ಯೋಜನೆಯಲ್ಲಿ ಸೌಲಭ್ಯ ಕಲ್ಪಿಸುವುದು, ಲಾಕ್ ಡೌನ್ ನಂತರ ಆತ್ಮಹತ್ಯೆ ಮಾಡಿಕೊಂಡ ರಾಜ್ಯದ 30 ಕ್ಕೂ ಅಧಿಕ ನೇಕಾರ ಕುಟುಂಬಸ್ಥರಿಗೆ ಈಗಾಗಲೇ ಮುಖ್ಯಮಂತ್ರಿಗಳು ಘೋಷಿಸಿದ 5 ಲಕ್ಷ ಪರಿಹಾರ ತತಕ್ಷಣ ಜಾರಿಯಾಗಬೇಕು,
ಲಾಕ್ ಡೌನ್ ನಂತರದ ದಿನಗಳಲ್ಲಿ ಜವಳಿ ಪರಿಕರ ಮೇಲೇ ಹೇರಲಾದ ಶೇ 12 ರಷ್ಟು ಜಿಎಸ್ಟಿ ಹೇರಿಕೆ ಹಿಂಪಡಿಯಬೇಕು, ಪವರ್ ಲೂಮ್ ಗಳಿಗೆ ಸರ್ಕಾರದ ರಿಯಾಯಿತಿ ಒಂದು ಯೂನಿಟ್ ಗೆ ರೂ.1.25 ದರ, ಸದ್ಯ ಕನಿಷ್ಠ ದರ ಸೇರಿ ರೂ. 2.50 ಆಗಿದ್ದು ಹೀಗಾಗಿ ವೃತ್ತಿ ಮುನ್ನಡೆಸಲು ಹೆಣಗಾಡಬೇಕಾದ ಸ್ಥಿತಿ ಎದುರಾಗಿದ್ದು ನೇಕಾರಿಕೆ ಪುನಶ್ಚೇತನಕ್ಕೆ ಇತರೆ ರಾಜ್ಯಗಳಲ್ಲಿ ಇರುವಂತೆ 20 ಎಚ್ ಪಿ ವರೆಗೆ ಮಾಸಿಕ ಉಚಿತ ವಿದ್ಯುತ್ ನೀಡಬೇಕೆಂದು
ಹೀಗೆ ಹಲವು ವೃತ್ತಿ ನೇಕಾರರ ಬೇಡಿಕೆಗಳನ್ನು ಸ್ವೀಕರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹುತೇಕ ಎಲ್ಲ ಬೇಡಿಕೆಗಳ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ರಾಜ್ಯ ನೇಕಾರ ಸಮುದಾಯಗಳ ಯುವ ಮುಖಂಡ ವಿಜಯಕುಮಾರ್ ಭಾಪ್ರಿ ತಿಳಿಸಿದ್ದಾರೆ.
ಇದೇ ವೇಳೆ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ, ಕೈಮಗ್ಗ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಉಪಸ್ಥಿತರಿದ್ದರು.