ಹುಬ್ಬಳ್ಳಿ: ಈಡಿಗ ಸಮುದಾಯದ ಮುಖಂಡ ಬಿ.ಕೆ. ಹರಿಪ್ರಸಾದ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮಸಲತ್ತು ನಡೆಸುತ್ತಿದ್ದಾರೆ. ಅವರ ವಿರುದ್ಧ ಮಾತನಾಡಲು ತಾಕತ್ತು ಇಲ್ಲದೆ ಹರಿಪ್ರಸಾದ್ ಅವರು ಬಿಜೆಪಿಗೆ ಬಯ್ಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಮ್ಮ ನಾಯಕತ್ವದ ವಿರುದ್ಧ ಬೆಂಗಳೂರಿನಲ್ಲಿ ಸಮಾವೇಶ ನಡೆಯುತ್ತಿದೆ ಎಂದು ಬಿ.ಕೆ. ಹರಿಪ್ರಸಾದ ಅವರೇ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯರೇ ಅವರ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಅವರ ವಿರುದ್ಧ ಮಾತನಾಡಲಾಗದೆ ಚಡ್ಡಿ ವಿಷಯ ಮಾತನಾಡುತ್ತಿದ್ದಾರೆ. ಹರಿಪ್ರಸಾದರು ಚಡ್ಡಿ ಹಾಕುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಅಲ್ಲದೆ, ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೆ ಎಂದೂ ಗೊತ್ತಿಲ್ಲ. ಅವರೇ ಉತ್ತರ ಕೊಡಬೇಕು’ ಎಂದರು.
ನಗರದಲ್ಲಿ ಭಾನುವಾರ ಮಾಧ್ಯಮದವರ ಮಾತನಾಡಿದ ಅವರು, ಕೇಂದ್ರ ಸರಕಾರ ನೀಡಿದ್ದ ಐದು ಕೆ.ಜಿ. ಅಕ್ಕಿಯನ್ನೇ ರಾಜ್ಯ ಕಾಂಗ್ರೆಸ್ ಸರಕಾರ ಅನ್ನಭಾಗ್ಯ ಯೋಜನೆ ಹೆಸರಲ್ಲಿ ಪ್ರಚಾರ ಪಡೆಯುತ್ತಿದೆ ಎಂದು ಕುಟುಕಿದರು.
ಸಾರಿಗೆ ಸಂಸ್ಥೆಗಳ ಬಸ್’ಗಳ ಸಂಖ್ಯೆ ಕಡಿಮೆ ಮಾಡಲಾಗಿದೆ, ವಿದ್ಯುತ್ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಆಡಳಿತದ ಮೇಲೆ ಸರಕಾರ ಸಂಪೂರ್ಣ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಪರಸ್ಪರ ಹೊಂದಾಣಿಕೆಯಿಲ್ಲದೆ ಗುಂಪುಗಾರಿಕೆಯಿಂದಾಗಿ ಸರಕಾರ ಹಳಿತಪ್ಪಿದೆ ಎಂದು ಟೀಕಿಸಿದರು.
ಸರಕಾರ ರಚನೆಯಾಗಿ ಆರು ತಿಂಗಳಾಗಿದ್ದು, ಭ್ರಷ್ಟಾಚಾರ ನಡೆಸಲು ಪಕ್ಷದ ಮುಖಂಡರಲ್ಲಿ ಪರಸ್ಪರ ಸ್ಪರ್ಧೆ ಏರ್ಪಟ್ಟಿದೆ. ಇದು ಸಿ.ಸಿ(ಕರಪ್ಪನ್ ಮತ್ತು ಕಂಪ್ಲೆಂಟ್) ಸರಕಾರವಾಗಿದೆ’ ಎಂದು ಸಚಿವ ಜೋಶಿ ಆರೋಪಿಸಿದರು.