ಬೆಂಗಳೂರು: ಕಾಂಗ್ರೆಸ್ ಸರ್ಕಾರವು ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಬಯ್ಯುವುದು ಬಿಟ್ಟರೆ ತಾವು ಮಾಡಿದ ಅಭಿವೃದ್ಧಿ ಕಾರ್ಯ ಏನೆಂದು ತಿಳಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಸುಳ್ಳಿನ ಆರ್ಥಿಕತೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದರು.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಂದಿದ್ದ ರೈತ ವಿದ್ಯಾ ನಿಧಿ, ಬಿ. ಎಸ್. ಯಡಿಯೂರಪ್ಪ ಅವರು ತಂದಿದ್ದ ಕಿಸಾನ್ ಸಮ್ಮಾನ್ ರದ್ದು ಮಾಡಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿಲ್ಲ ಎಂದರು.
5 ಸಾವಿರ ರೂ. ನಿಂದ 50 ಸಾವಿರ ರೂ. ವರೆಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಕೇವಲ 1,200 ರೂ. ಗೆ ಇಳಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ನೀರಾವರಿ, ಲೋಕೋಪಯೋಗಿ ಇಲಾಖೆಯಿಂದ ಹಣ ಕಡಿತ ಮಾಡಲಾಗಿದೆ. ಈ ಬಗ್ಗೆಯೂ ಸರ್ಕಾರ ಉತ್ತರ ನೀಡಿಲ್ಲ. ರೈತರಿಗೆ ನೀಡುವ ಸಹಾಯ ಧನದ ಬಗ್ಗೆಯೂ ಪ್ರತಿಕ್ರಿಯೆ ನೀಡದೆ ಕಾಗೆ ಗುಬ್ಬಕ್ಕ ಕಥೆ ಹೇಳಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಿದ್ದರಾಮಯ್ಯ ಅವರ ಎಕನಾಮಿಕ್ಸ್, ಸುಳ್ಳು ಎಕನಾಮಿಕ್ಸ್ ಎಂದರೆ ಅದು ಸಿದ್ದು ಎಕನಾಮಿಕ್ಸ್ .ಬಿಜೆಪಿ ಸರ್ಕಾರ ಇದ್ದಾಗ ಸರ್ ಪ್ಲಸ್ ಬಜೆಟ್ ಇದ್ದರೆ, ಕಾಂಗ್ರೆಸ್ ಸರ್ಕಾರದಿಂದ ಅದು ಹೋಪ್ ಲೆಸ್ ಬಜೆಟ್ ಆಗಿದೆ. 1.5 ಲಕ್ಷ ಕೋಟಿ ರೂ. ಸಾಲ ಪಡೆದಿದ್ದು, ಎಲ್ಲ ಕಡೆ ಹಣ ಶೂನ್ಯವಾಗಿದೆ ಎಂದು ಟೀಕಿಸಿದರು.