ವರ್ಷಕ್ಕೆ 13 ಲಕ್ಷ ಜನರಿಗೆ ಉದ್ಯೋಗ : ಬೊಮ್ಮಾಯಿ
ನಿಮ್ಮ ಸುದ್ದಿ ಬಾಗಲಕೋಟೆ
ಉದ್ಯಮ, ಕೈಗಾರಿಕೆ ಹಾಗೂ ಖಾಸಗಿ ಸೇವಾ ವಲಯಗಳಿಗೆ ಆರ್ಥಿಕತೆ ಹೆಚ್ಚಿಸಿ, ಬೆಂಬಲ ನೀಡುವ ಮೂಲಕ ರಾಜ್ಯದಲ್ಲಿ ವರ್ಷಕ್ಕೆ 13 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಇಲಕಲ್ಲ ತಾಲೂಕಿನ ಆರ್.ವೀರಮಣಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಹಮ್ಮಿಕೊಂಡ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ವಿವಿಧ ಫಲಾನುಭವಿಗಳಿಗೆ ಆದೇಶ ಪ್ರತಿಗಳನ್ನು ವಿತರಿಸಿ ಮಾತನಾಡಿದ ಅವರು ಕಳೆದ 4 ವರ್ಷಗಳಲ್ಲಿ ಪ್ರತಿ ವರ್ಷ 13 ಲಕ್ಷದಂತೆ ಜನರಿಗೆ ಉದ್ಯೋಗ ನೀಡಲಾಗಿದೆ. ಎಲ್ಲಿ ದುಡಿಯುವ ವರ್ಗಕ್ಕೆ ದುಡಿಮೆ ಸಿಗುತ್ತಿದೆಯೋ ಆ ನಾಡಿನಲ್ಲಿ ಬಡತನವಿಲ್ಲ ಎಂದರು.
ಒಂದು ಕಾಲದಲ್ಲಿ ದುಡ್ಡೆ ದೊಡ್ಡಪ್ಪ ಎನ್ನುತ್ತಿದ್ದರು ಆದರೆ ಇಂದಿನ ಕಾಲದಲ್ಲಿ ದುಡಿಮೆಯೇ ದೊಡ್ಡಪ್ಪ ಎನ್ನುವಂತಾಗಿದೆ. ಇರುವ ಭೂಮಿ ಯಾವಾಗಲೂ ಬದಲಾಗುವದಿಲ್ಲ. ಅದರ ಮೇಲಿನ ಅವಲಂಬಿತರು ಮಾತ್ರ ಹೆಚ್ಚಾಗುತ್ತಿದೆ. ಭೂಮಿ ಮೇಲೆ ಇರುವ ಪ್ರತಿಯೊಬ್ಬರು ಉದ್ಯೋಗದಾತರನ್ನಾಗಿ ಮಾಡುವ ಜವಾಬ್ದಾರಿಯಿಂದ ಅವರಿಗೆ ಶಿಕ್ಷಣವನ್ನು ಕೊಟ್ಟು ಸರಕಾರದಲ್ಲಿರುವ ಉನ್ನತ ಹುದ್ದೆಗಳನ್ನು ಸಹ ಬಡವರು ಪಡೆಯುವಂತಾಗುವ ಕನಸು ರಾಜ್ಯ ಸರಕಾರದ್ದಾಗಿದೆ ಎಂದರು.
ಯಾವ ಮಕ್ಕಳು ಆರ್ಥಿಕ ಸ್ಥಿತಿಯಿಂದ ವಿದ್ಯಾಬ್ಯಾಸ ಸ್ಥಗಿತಗೊಳಿಸಬಾರದು ಎಂಬ ಹಿತದೃಷ್ಠಿಯಿಂದ ಈ ವರ್ಷದ ಬಜೆಟ್‍ನಲ್ಲಿ ಪಿಯುಸಿಯಿಂದ ಪದವಿವರೆಗೆ ಉಚಿತ ಶಿಕ್ಷಣ, ದುಡಿಯುವ ಹೆಣ್ಣು ಮಕ್ಕಳಿಗೆ ಉಚಿತ ಬಸ್‍ಪಾಸ್ ಸೌಲಭ್ಯ ಘೋಷಿಸಲಾಗಿದೆ. ದುಡಿಯುವ ವರ್ಗದಲ್ಲಿ, ಹೆಣ್ಣುಮಕ್ಕಳಲ್ಲಿ, ಯುವಕರಲ್ಲಿ ಶಕ್ತಿ ತುಂಬಿದಲ್ಲಿ ಅವರಲ್ಲಿರುವ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ ಇದು ಬದಲಾವಣೆ ತರುವಂತಹ ಕೆಲಸವಾಗಿದೆ ಎಂದರು.
ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಿವಿಧ ನೀರಾವರಿ ಯೋಜನೆಗಳಿಗೆ 28 ಸಾವಿರ ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಭೂಮಿ ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ದರ ನಿಗದಿ ಮಾಡಿ ಐತಿರ್ಪು ಹೊರಡಿಸಲಾಗಿದೆ. 10 ಸಾವಿರ ಸ್ತ್ರಿಶಕ್ತಿ ಸಂಘಗಳಿಗೆ 1 ಲಕ್ಷ ರೂ.ಗಳನ್ನು ನೀಡಿ 5 ಲಕ್ಷ ರೂ.ಗಳ ಯೋಜನೆ ರೂಪಿಸಿ ಉತ್ಪಾದನೆ ಮಾಡಿ ಮಾರುಕಟ್ಟೆ ಕಲ್ಪಿಸುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಅದೇ ರೀತಿ ಯುವಕರಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2 ಯುವಕ ಸಂಘಕ್ಕೆ 5 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ಮಹಿಳೆ ಮತ್ತು ಯುವಕರು ರಾಜ್ಯದ ಎರಡು ಕನ್ಮಣಿಗಳಿದ್ದ ಹಾಗೆ ಎಂದರು.
ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾದ ಮೇಲೆ ಉತ್ತರ ಕರ್ನಾಟಕದ ಅಬಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅಖಂಡ ಬಾಗಲಕೋಟೆ-ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗೆ ಸಾಕಷ್ಟು ಅನುದಾನ ನೀಡಲಾಗಿದೆ. ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ದರ ನಿಗದಿ ಮಾಡಲಾಗಿದೆ. ನೀರಾವರಿ ಭೂಮಿಗೆ 24 ಲಕ್ಷ ರೂ., ಒಣ ಭೂಮಿಗೆ 20 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಗಿದೆ.ಈ ಭಾಗದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಮಿ ಅವರು ಈ ನೆಲದ ಋಣ ತಿರಿಸುವ ಕೆಲಸ ಮಾಡಿದ್ದಾರೆ ಎಂದರು.
ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಹುನಗುಂದ ಕ್ಷೇತ್ರದಲ್ಲಿ ಒಟ್ಟು 1542.88 ಕೋಟಿ ರೂ.ಗಳ ವೆಚ್ಚದ 13 ವಿವಿಧ ಅಬಿವೃದ್ದಿ ಕಾಮಗಾರಿಗಳ ಲೋಕಾರ್ಪಣೆ ಮತ್ತು 483.88 ಕೋಟಿ ರೂ.ಗಳ ವೆಚ್ಚದ ಒಟ್ಟು 16 ಕಾಮಗಾರಿಗಳಿಗೆ ಮುಖ್ಯಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪ್ರತಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಸಚಿವ ಹಾಲಪ್ಪ ಆಚಾರ್ಯ, ಸಂಸದರಾದ ಪಿ.ಸಿ.ಗದ್ದಿಗೌಡರ, ಸಂಗಣ್ಣ ಕರಡಿ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ, ಜಿ.ಪಂ ಸಿಇಓ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ ಬಸವರಾಜ ನಾಯ್ಕೋಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.