ವಿಜಯಪುರ: ಮೊದಲ ಹಂತದ ಚುನಾವಣೆಯಲ್ಲಿ ನಿರೀಕ್ಷಿತ ಮತಗಳು ಬರುವುದಿಲ್ಲ ಎಂದು ಹತಾಶರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಶುಕ್ರವಾರ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ರಾಜು ಹಲಗೂರು ರವರ ಪರವಾಗಿ ಮಾತ ಯಾಚನೆ ಮಾಡಿ ಮಾತನಾಡಿದ ಅವರು, ಸಂವಿಧಾನದ 15 ಮತ್ತು 16 ನೇ ಕಲಂ ನಲ್ಲಿ ಸ್ಪಷ್ಟವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಹೇಳಲಾಗಿದೆ ಎಂದರು.
ಅದರಲ್ಲಿ ಹಿಂದೂಗಳು ಹಾಗೂ ಮುಸಲ್ಮಾನರು, ಕ್ರಿಶ್ಚಿಯನ್ ಹಾಗೂ ಎಲ್ಲಾ ಜನರೂ ಬರುತ್ತಾರೆ. ಮುಸಲ್ಮಾನರಿಗೆ ಮೀಸಲಾತಿ ಕೊಡಲಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅವರು ಸಂವಿಧಾನದ ವಿರುದ್ಧವಾಗಿ ಮಾತನಾಡುತ್ತಿದ್ದು, ಹಿಂದೂಗಳ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ಕೊಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಒಬ್ಬ ಪ್ರಧಾನ ಮಂತ್ರಿಯಾಗಿ ಈ ರೀತಿ ಮಾತುಗಳನ್ನಾಡುವುದು ಅವರ ಸ್ಥಾನಕ್ಕೆ ಚ್ಯುತಿ ತರುವ ಕೆಲಸ ಎಂದು ತಿಳಿಸಿದರು.
ನರೇಂದ್ರ ಮೋದಿಯವರು ಹತ್ತು ವರ್ಷ ಪ್ರಧಾನಿಯಾಗಿ ಬಡವರು, ಯುವಕರು, ದಲಿತರು, ಅಲ್ಪಸಂಖ್ಯಾತ ಪರವಾಗಿ ಕೆಲಸ ಮಾಡಿಲ್ಲ. ಬೆಲೆಯೇರಿಕೆ, ನಿರುದ್ಯೋಗ, ರೈತರ ಸಂಸ್ಥೆಗಳ ಬಗ್ಗೆ ಪ್ರಧಾನಿಗಳು ಚರ್ಚೆ ಮಾಡುವುದಿಲ್ಲ. ಅವರು ಸಾಧನೆಗಳನ್ನು ಹೇಳದೆ ಭಾವನೆಗಳನ್ನು ಕೆರಳಿಸಿ, ಧರ್ಮ ಧರ್ಮಗಳ ನಡುವೆ, ಜಾತಿಗಳ ನಡುವೆ ಬೆಂಕಿ ಇಡುವ ಕೆಲಸಗಳನ್ನು ಮಾಡಿದ್ದಾರೆ. ಇತ್ತೀಚಿನ ಅವರ ಭಾಷಣಗಳನ್ನು ಗಮನಿಸಿದರೆ ಮೊದಲ ಹಂತದ ಚುನಾವಣೆಯಲ್ಲಿ ಅವರು ನಿರೀಕ್ಷಿಸಿದ ಮತಗಳು ಬರುವುದಿಲ್ಲ ಎಂದು ಅವರು ಹತಾಶರಾಗಿದ್ದಾರೆ. ಸಂಬಂಧ ಪಡದ ಅನೇಕ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಸೂಚಿಸಿದರು.