ಬೆಂಗಳೂರು: ರಾಜ್ಯದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಜಲಕ್ಷಾಮ ಉಂಟಾಗಿದೆ. ನೀರಿನ ಸಮಸ್ಯೆಯಿಂದಾಗಿ ಜನರು ಪರದಾಟ ನಡೆಸುತ್ತಿದ್ದು, ಆದರೆ, ಲೋಕಸಭೆ ಚುನಾವಣೆಗೆ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಸರ್ಕಾರ ಅಲ್ಲಲ್ಲಿ ಸಮಾವೇಶಗಳನ್ನು ನಡೆಸುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.
ನೀರಿನ ಬಿಕ್ಕಟ್ಟಿನ ನಡುವೆ ಸಮಾವೇಶಗಳನ್ನು ಆಯೋಜಿಸುತ್ತಿರುವ ರಾಜ್ಯ ಸರ್ಕಾರವನ್ನು ಟೀಕಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ ಅಶೋಕ, “ರಾಜ್ಯದಲ್ಲಿ ಜಲಕ್ಷಾಮದ ಸೂತಕ, ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರೆಂಟಿ ಉತ್ಸವ” ಎಂದು ಜರಿದಿದ್ದಾರೆ.
ಅಲ್ಲದೆ, ” ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಇನ್ನೇನೋ ಚಿಂತೆ ಎಂಬಂತೆ ಇಲ್ಲಿ ಜನ ಜಲಕ್ಷಾಮದಿಂದ ಹನಿ ನೀರಿಗೂ ಹಾಹಾಕಾರ ಪಡುತ್ತಿದ್ದರೆ, ಅತ್ತ ಸಿಎಂ ಸಿದ್ದರಾಮಯ್ಯ ಅವರು ಗ್ಯಾರೆಂಟಿ ಸಮಾವೇಶದ ಹೆಸರಿನಲ್ಲಿ ಜನರ ದುಡ್ಡಿನಲ್ಲಿ ಜಾತ್ರೆ ಮಾಡುತ್ತಿದ್ದಾರೆ” ಎಂದರು.
ರಾಜ್ಯದಲ್ಲಿ 900 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಲಕ್ಷಾಂತರ ಕೃಷಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ಊರು ಬಿಟ್ಟು ಗುಳೇ ಹೋಗಿದ್ದಾರೆ, 40ಕ್ಕೂ ಹೆಚ್ಚು ನೇಕಾರರು ದಿಕ್ಕು ಕಾಣದೆ ಜೀವ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಜನ ತೊಟ್ಟು ನೀರಿಗೂ ಪರದಾಡುತ್ತಿದ್ದಾರೆ” ಎಂದರು.