ಬೆಂಗಳೂರು: ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನ ಬದಲಿಸುತ್ತೇವೆ ಎಂದು ಪುಃನ ಹೇಳಿರುವ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಯರನ್ನು ಬಲವಾಗಿ ಖಂಡಿಸಿದರು. ಹೆಗಡೆಯವರು ಹಾಗೆ ಹೇಳಿದ್ದು ಮೊದಲ ಸಲವೇನಲ್ಲ, ಇದಕ್ಕೂ ಮೊದಲು ಅವರು ಇದೇ ಹೇಳಿಕೆ ನೀಡಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ಹಿಂದೆ ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ಹೇಳಿಕೆ ನೀಡಿದ್ದಾಗಲೇ ಅವರ ವಿರುದ್ಧ ಕ್ರಮ ಜರುಗಿಸಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು. ಅವರ ಹೇಳಿಕೆ ಮತ್ತು ತಮ್ಮ ನಡುವೆ ಸಂಬಂಧವಿಲ್ಲ, ಅದು ಅವರ ವೈಯಕ್ತಿಕ ವಿಚಾರ ಅಂತ ಬಿಜೆಪಿ ನಾಯಕರು ಹೇಳಿದರೆ ಹೇಗೆ? ಬಿಜೆಪಿ ನಾಯಕರ ಹಿಡನ್ ಅಜೆಂಡಾ ಅದೇ, ತಮಗೆ ಬೇಕಿರುವದನ್ನು ಹೆಗಡೆ ಮೂಲಕ ಹೇಳಿಸುವುದು ಎಂದು ಸಿ.ಎಂ ಸಿದ್ದು ಹೇಳಿದರು.
ದೇಶದ ಎಲ್ಲ ಬಡವರು, ಬಲ್ಲಿದರು, ದಲಿತರು, ಹಿಂದುಳಿದ ವರ್ಗಗಳ ಜನ, ಶೋಷಿತರು, ಅಲ್ಪಸಂಖ್ಯಾತರು ಹೆಗಡೆ ಹೇಳಿಕೆಯನ್ನು ವಿರೋಧಿಸುತ್ತಾರೆ, ಅವರು ಹೇಳಿದ ಹಾಗೆ ಸಂವಿಧಾನ ಬದಲಾವಣೆಗೆ ಪ್ರಯತ್ನವೇನಾದರೂ ಮಾಡಿದರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ತಿಳಿಸಿದರು.