ಮೈಸೂರು: ತಾವೊಬ್ಬರೇ ಶ್ರೇಷ್ಠರು ಎಂದು ಕರೆಸಿಕೊಳ್ಳುವವರು ಬಹಳ ಪುಕ್ಕಲರಾಗಿರುತ್ತಿದ್ದು, ಅವರು ತಾವು ಮಾತ್ರ ಶ್ರೇಷ್ಠರು ಎಂದು ಬಿಂಬಿಸಿಕೊಳ್ಳಲು ಒದ್ದಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರ ವೈಶಾಖ ಬುದ್ಧಪೂರ್ಣಿಮ ಹಾಗೂ ಭಗವಾನ್ ಬುದ್ಧರ 2568ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಾತಿ ವ್ಯವಸ್ಥೆ , ವರ್ಣಾಶ್ರಮದಿಂದ ಮನುಷ್ಯ ಮನುಷ್ಯನನ್ನು ಶೋಷಿಸುವ ಅಸಮಾನತೆ ಸೃಷ್ಟಿಯಾಯಿತು. ಅಸಮಾನತೆ ಪೋಷಿಸುವ ಜಾತಿ ವ್ಯವಸ್ಥೆ ಅಳಿಸಲು ಬುದ್ಧ, ಬಸವ, ಅಂಬೇಡ್ಕರ್ ರೀತಿ ಹಲವು ಮಹನೀಯರು ಶ್ರಮಿಸಿದರು ಎಂದು ವಿವರಿಸಿದರು.
ಅತ್ಯಂತ ಕಡು ಬಡವ ಮೇಲ್ಜಾತಿಯವರನ್ನು ನಾವು ಬುದ್ದಿ, ಸ್ವಾಮಿ ಅಂತ ಗೌರವಿಸುತ್ತೇವೆ. ಅದೇ ಅನಕೂಲಸ್ಥ ಕೆಳ ಜಾತಿಯವರನ್ನು ಏಕವಚನದಲ್ಲಿ ಅಗೌರವದಿಂದ ಕರೆಯುತ್ತೇವೆ. ಇದೇ ಗುಲಾಮಗಿರಿ ಮನಸ್ಥಿತಿ. ಈ ಮನಸ್ಥಿತಿಯನ್ನು ಅಳಿಸಲು ಬುದ್ಧ, ಬಸವ ಅಂಬೇಡ್ಕರ್ ಸೇರಿ ಹಲವರು ಶ್ರಮಿಸಿದರು.
ಪಟ್ಟಭದ್ರ ಹಿತಾಸಕ್ತಿಗಳು ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ಕಾಲದಲ್ಲೂ ಇದ್ದರು. ಈಗಲೂ ಇದ್ದಾರೆ. ಇವರು ಸಮಾಜದ ಪ್ರಗತಿಯ ಶತ್ರುಗಳು. ಆದರೆ ನಮ್ಮ ಸಂವಿಧಾನ ಎಲ್ಲಾ ಜಾತಿ ಸಮುದಾಯಗಳಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ಆದ್ದರಿಂದ ಸಂವಿಧಾನ ಜ್ಞಾನ ಸರ್ವರಿಗೂ ಅಗತ್ಯ ಎಂದರು.
ಶ್ರೇಷ್ಠತೆಯ ವ್ಯಸನ ಹೊಂದಿದ್ದ ಹಿಟ್ಲರ್ ಲಕ್ಷಾಂತರ ಮನುಷ್ಯರ ಕೊಲೆಗೆ ಕಾರಣರಾದರು. ಪುಕ್ಕಲರು ಮಾತ್ರ ತಾವೊಬ್ಬರೇ ಶ್ರೇಷ್ಠರು ಎಂದು ಬಿಂಬಿಸಿಕೊಳ್ಳಲು ಒದ್ದಾಡುತ್ತಾರೆ ” ಎಂದು ಹೇಳಿದರು.