ಬೆಂಗಳೂರು: ರಾಜ್ಯದಲ್ಲಿ ಬರಗಾಲ ತಲೆದೋರಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗೊಳೊಂದಿಗೆ ಬರ ನಿರ್ವಹಣೆ ಪರಿಶೀಲನೆ ಸಭೆ ನಡೆಸಿ ಚರ್ಚೆ ನಡೆಸಿದರು ಎಂದು ಮಾಹಿತಿ ತಿಳಿದು ಬಂದಿದೆ.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆಯಲು ಸೂಚಿಸಲಾಗಿದೆ. ಅಲ್ಲದೆ, ಸಹಾಯವಾಣಿ ಆರಂಭಿಸಲು ಸೂಚಿಸಲಾಗಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸರ್ಕಾರ ಎಲ್ಲಾ ಕಾರ್ಯಕ್ರಮ ಮಾಡಲಿದೆ. ಹಣಕ್ಕೂ ತೊಂದರೆ ಆಗದ ರೀತಿ ನೋಡಿಕೊಳ್ಳುತ್ತೇವೆ. ಕರ್ನಾಟಕದಲ್ಲಿ ಪ್ರಸಕ್ತ ವರ್ಷ ಬರಗಾಲವಿದೆ. ರಾಜ್ಯದ 194 ತಾಲೂಕುಗಳಲ್ಲಿ ತೀವ್ರ ಬರಗಾಲವಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗದಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಕುಡಿಯುವ ನೀರು ಪೂರೈಸಲು ಎಷ್ಟೇ ಹಣ ಬೇಕಿದ್ದರೂ ಸರ್ಕಾರ ಕೊಡುತ್ತದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 854 ಕೋಟಿ ರೂಪಾಯಿ ಇದೆ. ಬರ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಆಡಳಿತ ಮಟ್ಟದಲ್ಲಿ ಸಭೆ ನಡೆದಿದೆ. ಡಿಸಿಎಂ ಅಧ್ಯಕ್ಷತೆಯಲ್ಲಿ ಬರ ನಿರ್ವಹಣೆ, ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆದಿದೆ. ಸಮಸ್ಯೆ ಇರುವ ಕಡೆ ಯೋಜನೆ ರೂಪಿಸುವಂತೆ ಸಭೆಯಲ್ಲಿ ಸೂಚನೆ ನೀಡಿದ್ದೇನೆ ಎಂದು ವಿವಿರಿಸಿದರು.